ಕೊಲೊಂಬೋ: ಶ್ರೀಲಂಕಾದ ಅತ್ಯಂತ ಹಳೆಯ ವಿಮಾನ ನಿಲ್ದಾಣವು 54 ವರ್ಷಗಳ ನಂತರ ಮತ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ. ಅದರ ಮೊದಲ ಅಂತರಾಷ್ಟ್ರೀಯ ವಿಮಾನ ಲ್ಯಾಂಡಿಂಗ್ನೊಂದಿಗೆ ಭಾನುವಾರ ಮರುಪ್ರಾರಂಭಗೊಂಡಿದೆ.
ಮಾಲ್ಡೀವ್ಸ್‌ನಿಂದ ಬಂದ ವಿಮಾನವೊಂದು ಇಲ್ಲಿನ ರತ್ಮಲಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. 50 ಆಸನಗಳ ಮಾಲ್ಡೀವಿಯನ್ ವಿಮಾನವು ಕೊಲಂಬೊಕ್ಕೆ ವಾರಕ್ಕೆ ಮೂರು ವಿಮಾನಗಳನ್ನು ನಿರ್ವಹಿಸುತ್ತದೆ. ನಂತರ ಅದನ್ನು ವಾರಕ್ಕೆ ಐದರಂತೆ ವಿಸ್ತರಿಸಲಾಗುವುದು ಎಂದು ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ.
60ರ ದಶಕದ ಉತ್ತರಾರ್ಧದಲ್ಲಿ ಕಟುನಾಯಕೆಯಲ್ಲಿರುವ ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಾರ್ಯಾರಂಭ ಮಾಡಿದ ನಂತರ ರತ್ಮಲಾನ ವಿಮಾನ ನಿಲ್ದಾಣವನ್ನು ದೇಶಿಯ ವಿಮಾನ ನಿಲ್ದಾಣವಾಗಿ ಪರಿವರ್ತಿಸಲಾಯಿತು. ಬಂಡಾರನಾಯಕೆ ವಿಮಾನ ನಿಲ್ದಾಣವು ಶ್ರೀಲಂಕಾದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
1938ರಲ್ಲಿ ಸ್ಥಾಪಿತವಾದ ರತ್ಮಲಾನಾ ವಿಮಾನ ನಿಲ್ದಾಣವು ಶ್ರೀಲಂಕಾದ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿದೆ. ಒಂದು ಹಂತದಲ್ಲಿ ದೇಶದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿತ್ತು.