ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರು ಮಾಲೀಕರಿಲ್ಲದ ವಾಹನದಲ್ಲಿದ್ದ 40 ಕೋಟಿ ರೂಪಾಯಿ ಮೌಲ್ಯದ 52 ಕೆಜಿ ಚಿನ್ನ, 11 ಕೋಟಿ ರೂ.ಗೂ ಹೆಚ್ಚು ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಐಟಿ ಇಲಾಖೆ ಕಳೆದ ಕೆಲವು ದಿನಗಳಿಂದ ನಿರಂತರ ಶೋಧ ಕಾರ್ಯ ಕೈಗೊಂಡಿದ್ದು, ಇದೇ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ, ನಗದು ಜಪ್ತಿ ಮಾಡಲಾಗಿದೆ.
ಡಿಸಿಪಿ ಪ್ರಿಯಾಂಕ ಶುಕ್ಲಾ ಮಾಹಿತಿ ನೀಡಿ, ಗುರುವಾರ ರಾತ್ರಿ ಕುಶಾಲಪುರ ರಸ್ತೆಯಲ್ಲಿ ಮಾಲೀಕರಿಲ್ಲದ ಇನೋವಾ ಕ್ರಿಸ್ಟಾ ವಾಹನ ಬಹಳ ಹೊತ್ತಿನಿಂದ ನಿಂತಿರುವುದು ಕಂಡು ಬಂದಿದೆ. ಅದರೊಳಗೆ ಚೀಲಗಳು ಇರುವುದಾಗಿ ವ್ಯಕ್ತಿಯೊಬ್ಬರು ರತಿಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಣ, ಚಿನ್ನ ಪತ್ತೆಯಾಗಿದೆ. ಐಟಿ ಶೋಧ ಕಾರ್ಯ ನಡೆಸುತ್ತಿರುವುದರಿಂದ ಕಾರ್ ನಲ್ಲಿ ಚಿನ್ನ, ಹಣ ಇಟ್ಟಿರಬಹುದು. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.