ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಸ್ವಾತಂತ್ರ್ಯ ದಿನದಂದು ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ.
ಈಗಾಗಲೇ ಟ್ರ್ಯಾಕ್ಟರ್ ಮೆರವಣಿಗೆಗಾಗಿ ಜಿಂದ್ ನ ಉಚ್ಚಾನ ಕಲಾನ್‌ನಲ್ಲಿ ರೈತರು ಪೂರ್ವ ತಯಾರಿ ನಡೆಸಿದ್ದಾರೆ ಹಾಗೂ ಈ ಮೆರವಣಿಗೆಯನ್ನು ಮಹಿಳಾ ರೈತರು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ವರದಿ ಪ್ರಕಾರ, ನಾಳೆ ಮೆರವಣಿಗೆಯಲ್ಲಿ ಸುಮಾರು 5000 ವಾಹನಗಳು ಮತ್ತು 20,000 ರೈತರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ, ಖೇರಾ ಖಾಪ್ ಪಂಚಾಯತ್‌ನ ಮುಖ್ಯಸ್ಥ ಸತ್ಬೀರ್ ಪೆಹಲ್ವಾನ್ ಬಾರ್ಸೋಲಾ ಅವರು, ತಮ್ಮ ಟೇಬಲ್ ಬಾಕ್ಸ್ ಕೃಷಿಯಲ್ಲಿ ಬಳಸುವ ಸಾಧನಗಳ ಪ್ರದರ್ಶನ ಮತ್ತು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಗೂ ಕಿಸಾನ್ ಧ್ವಜವನ್ನು ಅಳವಡಿಸಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದರು. ರೈತರು 75 ನೇ ಸ್ವಾತಂತ್ರ್ಯ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್’ ಎಂದು ಆಚರಿಸುತ್ತಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ನಂತರ, ದೇಶಾದ್ಯಂತ ರೈತರು ಈ ದಿನವನ್ನು ಬ್ಲಾಕ್ ಮತ್ತು ತಹಸಿಲ್ ಮಟ್ಟದಲ್ಲಿ ತಿರಂಗಾ ರ್ಯಾಲಿಗಳೊಂದಿಗೆ ಆಚರಿಸಲಿದ್ದಾರೆ ಎನ್ನಲಾಗಿದೆ.
ಕುತೂಹಲ ಮೂಡಿಸಿದ ಸಚಿವ ಆನಂದ್ ಸಿಂಗ್ ನಡೆ; ನಾಳೆಯೇ ರಾಜೀನಾಮೆ…?
‘’ಆಗಸ್ಟ್ 15 ರಂದು, ಸಂಯುಕ್ತ ಕಿಸಾನ್ ಮೋರ್ಚಾ ಎಲ್ಲಾ ಘಟಕಗಳಿಗೆ ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್ ಎಂದು ಆಚರಿಸಲು ಕರೆ ನೀಡಿದೆ. ಅಂದು ತಿರಂಗಾ ಮೆರವಣಿಗೆಯನ್ನು ಆಯೋಜಿಸಲಾಗುವುದು. ಆ ದಿನ, ರೈತರು ಮತ್ತು ಕಾರ್ಮಿಕರು ಟ್ರ್ಯಾಕ್ಟರ್‌ಗಳು, ಮೋಟಾರ್ ಸೈಕಲ್‌ಗಳು, ಸೈಕಲ್‌ಗಳು ಮತ್ತು ಎತ್ತಿನಗಾಡಿಗಳ ಮುಖಾಂತರ ಪ್ರತಿಭಟನೆ ನಡೆಸಲಿದ್ದಾರೆ. ವಾಹನಗಳ ಮೇಲೆ ರಾಷ್ಟ್ರಧ್ವಜದೊಂದಿಗೆ ಈ ಮೆರವಣಿಗೆಗಳನ್ನು ಕೈಗೊಳ್ಳಲಾಗುವುದು’’ ಎಂದು ಎಐಕೆಎಸ್‌ಸಿಸಿಯ ಕವಿತಾ ಕುರುಗಂತಿ ಅವರು ಪಿಟಿಐಗೆ ತಿಳಿಸಿದರು.
ದೇಶಾದ್ಯಂತ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ರೈತರು ರ್ಯಾಲಿ ನಡೆಸಲಿದ್ದಾರೆ. ಸಿಂಗು, ಟಿಕ್ರಿ ಮತ್ತು ಗಾಜಿಪುರ ಸೇರಿದಂತೆ ದೆಹಲಿಯ ಗಡಿಗಳಲ್ಲಿ ರೈತರು ತ್ರಿವರ್ಣ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ. ಆದರೆ, ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದಿಲ್ಲ.
ಸಿಂಗು ಪ್ರಾಂತ್ಯದಲ್ಲಿ ರೈತರು ಪ್ರತಿಭಟನಾ ಸ್ಥಳದ ಮುಖ್ಯ ವೇದಿಕೆಯಿಂದ ಕೆಎಂಪಿ ಎಕ್ಸ್ ಪ್ರೆಸ್‌ವೇ ವರೆಗೆ ತ್ರಿವರ್ಣ ಧ್ವಜದೊಂದಿಗೆ ತಮ್ಮ ವಾಹನಗಳಲ್ಲಿ ಕೃಷಿ ಒಕ್ಕೂಟಗಳ ಧ್ವಜಗಳೊಂದಿಗೆ ಮೆರವಣಿಗೆ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.