ಚಿತ್ರದುರ್ಗ : ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ಬಳಸಿಕೊಂಡು ಪ್ರಸಕ್ತ ವರ್ಷದಲ್ಲಿ ರಾಜ್ಯಾದ್ಯಂತ 500 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆ.ಪಿ.ಎಸ್) ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳೂ ತುಂಬಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳಿಗೆ ಉತ್ತಮ ಬೇಡಿಕೆ ಇದೆ. ಇದಕ್ಕೆ ಕಾರಣ ಮಕ್ಕಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದಾಗಿದೆ. ಈ ಶಾಲೆಗಳಲ್ಲಿ ಮಕ್ಕಳು 01 ರಿಂದ 12 ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣ ಪಡೆದು ಹೊರಬರುತ್ತಾರೆ. ಬರುವ ಶೈಕ್ಷಣಿಕ ವರ್ಷದಿಂದ ಕೆ.ಪಿ.ಎಸ್. ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿಯಿಂದ ಶಿಕ್ಷಣ ನೀಡಲಾಗುವುದು. ಇದರಿಂದ ಮಕ್ಕಳ ಕಲಿಕೆಯಲ್ಲಿ ಯಾವುದೇ ಅಡೆ ತಡೆಗಳು ಬರುವುದಿಲ್ಲ. ಸ್ಥಳೀಯ ಶಾಸಕರುಗಳ ಅಭಿಪ್ರಾಯ ಪಡೆದು ಮೇಲ್ದೆರ್ಜೆಗೇರಿಸುವ ಶಾಲೆಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಸಿ.ಎಸ್.ಆರ್. ನಿಧಿ ಬಳಸಿ ಹೆಚ್ಚಿನ ಕೊಠಡಿಗಳೂ, ಪ್ರಯೋಗಾಲಯ, ವೃತ್ತಿ ಶಿಕ್ಷಣ, ಸುಸಜ್ಜಿತ ಶೌಚಾಲಯ ಮೂಲಭೂತ ಸೌಕರ್ಯ ಕಲ್ಪಿಸಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಎಲ್ಲಾ ವಿಷಯ ಶಿಕ್ಷಕರು, ದೈಹಿಕ, ಚಿತ್ರಕಲೆ, ಸಂಗೀತ ಶಿಕ್ಷಕರು ಕೆಪಿಎಸ್ ಶಾಲೆಗಳಲ್ಲಿ ಇರಲಿದ್ದಾರೆ. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇರಬೇಕಾದ್ದು ಸಹ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗಳನ್ನೇ ಮೇಲ್ದರ್ಜೆಗೇರಿಸಿಲು ಆಯ್ಕೆ ಮಾಡಲಾಗುವುದು. ಈ ಪಟ್ಟಿಯನ್ನು ಸ್ಥಳೀಯ ಶಾಸಕರ ಮೂಲಕ ಅನುಮೋದನೆ ಪಡೆದುಕೊಳ್ಳಲಾಗುವುದು. ಶಾಸಕರು ಬದಲಾವಣೆ ಸೂಚಿಸಿದರೆ ಪಟ್ಟಿಯಲ್ಲಿ ಮಾರ್ಪಡು ಸಹ ಮಾಡಲಾಗುವುದು ಎಂದರು.
ಮುಂದಿನ ಐದು ವರ್ಷಗಳಲ್ಲಿ 3,000 ಸಾವಿರ ಕೆ.ಪಿ.ಎಸ್ ಶಾಲೆ ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ. ರಾಜ್ಯದಲ್ಲಿ 6,000 ಸಾವಿರ ಗ್ರಾಮ ಪಂಚಾಯಿತಿಗಳು ಇದ್ದು, ತಲಾ ಎರಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಂದು ಕೆ.ಪಿ.ಎಸ್ ಶಾಲೆ ತೆರೆಯಲಾಗುವುದು. ಈ ಗುರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಆಶಯವನ್ನು ಸಚಿವ ಎಸ್. ಮಧು ಬಂಗಾರಪ್ಪ ವ್ಯಕ್ತಪಡಿಸಿದರು.