ಎಟಿಎಂ ನಲ್ಲಿ ಹಣ ತೆಗೆಯಲು ಹೋದ ವೇಳೆ ಹಣ ಬಾರದಿದ್ದರೂ ಸಹ ಖಾತೆಯಿಂದ ಕಡಿತಗೊಳಿಸಿದ್ದು, ಈ ವಿಚಾರವನ್ನು ಖಾತೆದಾರರು ಬ್ಯಾಂಕಿನ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಈಗ ದುಬಾರಿ ದಂಡ ತೆರಬೇಕಾಗಿದೆ. ಇಂತಹದೊಂದು ಘಟನೆ ಧಾರವಾಡದಲ್ಲಿ ನಡೆದಿದೆ.
ಪ್ರಕರಣದ ವಿವರ: ಧಾರವಾಡದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಗ್ರಾಹಕರಾದ ವಕೀಲ ಸಿದ್ದೇಶ ಹೆಬ್ಬಳ್ಳಿ ಎಂಬವರು 2020 ರ ನವೆಂಬರ್ 28ರಂದು ಎಟಿಎಂ ನಲ್ಲಿ 500 ರೂಪಾಯಿ ಪಡೆಯಲು ಹೋಗಿದ್ದರು. ಆದರೆ ಈ ಹಣ ಬಾರದಿದ್ದಾಗ ಪಕ್ಕದಲ್ಲಿದ್ದ ಮತ್ತೊಂದು ಎಟಿಎಂ ಯಂತ್ರದಲ್ಲಿ 500 ರೂಪಾಯಿ ಪಡೆದುಕೊಂಡಿದ್ದರು.
ಆದರೆ ಈ ಮೊದಲು ಮಾಡಿದ ಪ್ರಯತ್ನದಲ್ಲಿ ಹಣ ಬಾರದಿದ್ದರೂ ಸಹ ಅವರ ಖಾತೆಯಿಂದ 500 ರೂಪಾಯಿ ಕಡಿತಗೊಂಡಿತ್ತು. ಹೀಗಾಗಿ ಸಿದ್ದೇಶ್ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಕುರಿತಂತೆ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಆದರೆ ಬ್ಯಾಂಕಿನ ಸಿಬ್ಬಂದಿ ನಿರ್ಲಕ್ಷ ವಹಿಸಿದ್ದರು.
ಹೀಗಾಗಿ ವಕೀಲ ಸಿದ್ದೇಶ್ ಧಾರವಾಡ ಜಿಲ್ಲಾ ಗ್ರಾಹಕ ವೇದಿಕೆ ಮೊರೆ ಹೋಗಿದ್ದು, ಇದೀಗ ತೀರ್ಪು ಹೊರಬಿದ್ದಿದೆ. ದೂರುದಾರರಿಗೆ 2020ರ ನವಂಬರ್ 28 ರಿಂದ ಶೇಕಡ 8 ರ ಬಡ್ಡಿ ದರದಲ್ಲಿ 500 ರೂಪಾಯಿಯನ್ನು ಹಿಂದಿರುಗಿಸಬೇಕು. ಅಲ್ಲದೆ ರಿಸರ್ವ್ ಬ್ಯಾಂಕ್ ಸುತ್ತೋಲೆಯಂತೆ ದಿನಕ್ಕೆ ನೂರು ರೂಪಾಯಿ ಪರಿಹಾರದಂತೆ 677 ದಿನಗಳಿಗೆ 67,700 ರೂ., ಸೇವಾ ನ್ಯೂನ್ಯತೆ ಎಸಗಿ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ 25,000 ರೂಪಾಯಿ ಪರಿಹಾರ, ಪ್ರಕರಣದ ಖರ್ಚು ವೆಚ್ಚ 10,000 ರೂಪಾಯಿ ಹೀಗೆ ಒಟ್ಟು 1,02,700 ರೂಪಾಯಿಗಳನ್ನು 30 ದಿನಗಳಲ್ಲಿ ಗ್ರಾಹಕರಿಗೆ ನೀಡಬೇಕು ಎಂದು ಆದೇಶ ನೀಡಲಾಗಿದೆ.