ತಿರುವಣ್ಣಾಮಲೈ: ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸುಮಾರು 50 ಮಹಾರಾಷ್ಟ್ರದ ವಲಸೆ ಕುಟುಂಬಗಳು ತಮಿಳುನಾಡಿನ ವಿಲ್ಲುಪುರಂ ಮತ್ತು ಕಲಾಂಪುರ ರೈಲು ನಿಲ್ದಾಣದ ನಡುವಿನ 95 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. 120 ಕ್ಕೂ ಹೆಚ್ಚು ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಈ ಕುಟುಂಬಗಳು ಗುರುವಾರ ಅರಣಿ ಬಳಿ ಕಾಣಿಸಿಕೊಂಡರು.
ಜನವರಿ ತಿಂಗಳಲ್ಲಿ ಉದ್ಯೋಗ ಅರಸಿ ಈ ಕಾರ್ಮಿಕರು ತಮಿಳುನಾಡಿಗೆ ಬಂದಿದ್ದರು. ಫೆಬ್ರವರಿ 17 ರಂದು, ಗುತ್ತಿಗೆ ಆಧಾರದ ಮೇಲೆ ಭೂಗತ ಪೈಪ್‌ಲೈನ್ ಯೋಜನೆ ಕೆಲಸಕ್ಕಾಗಿ ವಿಲ್ಲುಪುರಂಗೆ ತಲುಪಿದರು. ಆದರೆ, ಯೋಜನೆಯಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ಅವರು ನಿರುದ್ಯೋಗಿಗಳಾಗಿ ವೇತನವಿಲ್ಲದೆ ಪರದಾಡಿದ್ದರು.
ಪರ್ಯಾಯ ಕೆಲಸ ಸಿಗುವ ಭರವಸೆಯಲ್ಲಿ ದಿನಗಟ್ಟಲೆ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರ ಉಳಿತಾಯದ ಹಣವೂ ಖಾಲಿಯಾದ ಕಾರಣ, ಅವರು ಸೇಂಜಿ-ಚೆಟ್‌ಪೇಟ್ ರಸ್ತೆಯ ಮೂಲಕ ಮೂರು ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಯಿತು. ತಮ್ಮ ಅಲ್ಪಸ್ವಲ್ಪ ಸಾಮಾನುಗಳನ್ನು ಹೊತ್ತು, ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಕಾರ್ಮಿಕರು ಕಲಾಂಪುರ ರೈಲು ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಕರುಣಾಜನಕ ದೃಶ್ಯ ವೈರಲ್ ಆಗಿದೆ. ಅಲ್ಲಿಂದ ಅವರು ಕಾಟ್ಪಾಡಿ ನಿಲ್ದಾಣಕ್ಕೆ ತೆರಳಿ ರೈಲು ಹತ್ತಲು ಯೋಜಿಸಿದ್ದರು.
ಮುಂಬೈ ಸೆಂಟ್ರಲ್‌ಗೆ ಎಕ್ಸ್‌ಪ್ರೆಸ್ ರೈಲು ಹತ್ತಲು ಯೋಜಿಸಿದ್ದರಿಂದ ಕಾರ್ಮಿಕರು ಕಾಟ್ಪಾಡಿ ನಿಲ್ದಾಣ ತಲುಪಲು ಬಯಸಿದ್ದರು ಎಂದು ಮೂಲಗಳು ತಿಳಿಸಿವೆ. “ನಮ್ಮಲ್ಲಿದ್ದ ಅಲ್ಪಸ್ವಲ್ಪ ಹಣವನ್ನೂ ಖರ್ಚು ಮಾಡಿದ್ದೇವೆ, ಈಗ ನಮಗೆ ಬೇರೆ ದಾರಿಯಿಲ್ಲ” ಎಂದು ಕಾರ್ಮಿಕರೊಬ್ಬರು ಹೇಳಿದರು. ಹಿರಿಯರು ಮತ್ತು ಚಿಕ್ಕ ಮಕ್ಕಳೂ ಸೇರಿದಂತೆ ಕುಟುಂಬಗಳು ತಮ್ಮ ಸಾಮಾನುಗಳನ್ನು ಹೊತ್ತು ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.