ವಿಶ್ವ ದಾಖಲೆ ಮಾಡಲು ಜನ ಎಂಥಾ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಭಿನ್ನ ವಿಭಿನ್ನ ಗಿನ್ನಿಸ್ ದಾಖಲೆಗಳಂತೂ ಎಲ್ಲರ ಗಮನಸೆಳೆಯುತ್ತವೆ. ಇಲ್ಲೊಬ್ಬ ವ್ಯಕ್ತಿ 50 ವರ್ಷಗಳ ಕಾಲ ಪ್ರತಿದಿನ ಬರ್ಗರ್ ತಿನ್ನುವ ಮೂಲಕ ವಿಶಿಷ್ಟ ದಾಖಲೆ ಮಾಡಿದ್ದಾನೆ.
ಯೌವ್ವನದಿಂದ ವೃದ್ಧಾಪ್ಯದವರೆಗೂ ಈತ ನಿತ್ಯವೂ ಬರ್ಗರ್ ತಿಂದು ಗಿನ್ನೆಸ್ ದಾಖಲೆಗೆ ಪಾತ್ರನಾಗಿದ್ದಾನೆ. ಈವರೆಗೆ ಒಟ್ಟು 32,340 ಬರ್ಗರ್ ತಿಂದು ಸಾಹಸ ಮೆರೆದಿದ್ದಾನೆ. ಈತನ ಹೆಸರು ಡಾನ್ ಗೋರ್ಸ್ಕೆ. ಮೆಕ್ ಡೊನಾಲ್ಡ್ಸ್ ಬರ್ಗರ್ ಅಂದ್ರೆ ಡಾನ್‌ಗೆ ಫೇವರಿಟ್ ಆಗಿತ್ತು. ಹಾಗಾಗಿಯೇ ಪ್ರತಿದಿನ ಬರ್ಗರ್ ತಿನ್ನಲು ಆರಂಭಿಸಿದ್ದರು.
ಆಗಸ್ಟ್ 2021ರವರೆಗಿನ ಎಣಿಕೆಯ ಆಧಾರದ ಮೇಲೆ ಅವರ ಹೆಸರನ್ನು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿಸಲಾಗಿದೆ. 20 ವರ್ಷಗಳ ಹಿಂದೆಯೇ ಗಿನ್ನೆಸ್ ದಾಖಲೆಗಾಗಿ ಡಾನ್ ಹೆಸರು ನೋಂದಾಯಿಸಿದ್ದರು. 1999ರಲ್ಲಿ 5,490 ಬಿಗ್ ಮ್ಯಾಕ್‌ಗಳನ್ನು ತಿಂದಿದ್ದರು. ಇಷ್ಟು ಬಿಗ್ ಮ್ಯಾಕ್‌ಗಳನ್ನು ಸೇವಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಡಾನ್ ಮೊದಲ ಬಾರಿ ಬರ್ಗರ್ ತಿಂದಿದ್ದು 1972ರ ಮೇ 17 ರಂದು. ಅಂದಿನಿಂದ ಇಂದಿನವರೆಗೂ ಪ್ರತಿದಿನ ಡಾನ್‌ಗೆ ಬರ್ಗರ್ ಬೇಕೇ ಬೇಕು. ಈ ಹವ್ಯಾಸವೇ ಅವರ ಹೆಸರನ್ನು ಗಿನ್ನೆಸ್ ದಾಖಲೆಯ ಪುಟಗಳಲ್ಲಿ ಸೇರಿಸಿದೆ. ಬರ್ಗರ್ ತಿಂದಿದ್ದು ಮಾತ್ರವಲ್ಲದೆ ಆ ರ್ಯಾಪರ್‌ಗಳನ್ನು ಕೂಡ ಅವರು ಸಂಗ್ರಹಿಸಿ ಇಟ್ಟಿದ್ದಾರೆ.