2016ರ ನವೆಂಬರ್ 8ರ ದಿನವನ್ನು ಯಾರು ತಾನೆ ಮರೆಯಲು ಸಾಧ್ಯ..? ಆ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಹಾಗೂ 1000 ರೂಪಾಯಿಗಳ ನೋಟನ್ನು ಅಮಾನ್ಯ ಮಾಡಿ ಘೋಷಣೆ ಹೊರಡಿಸಿದ್ದರು. ಈ ಅಮಾನ್ಯೀಕರಣಗೊಂಡ ನೋಟುಗಳಲ್ಲಿ 99.3 ಪ್ರತಿಶತ ನೋಟುಗಳು ವಾಪಸ್ ಆಗಿವೆ ಎಂದು ಆರ್.ಬಿ.ಐ. ಹೇಳಿದೆ.
ಇಂತಹದ್ದೊಂದು ಮಹತ್ವದ ಘೋಷಣೆಯನ್ನು ಮಾಡಿ ಐದು ವರ್ಷಗಳು ಕಳೆದಿವೆ. ಹಳೆಯ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳಲು ಸಾಕಷ್ಟು ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೇ ಕಾದಿದ್ದೂ ನಿಮಗೆ ನೆನಪಿರಬಹುದು. ಆದರೆ ಇದೆಲ್ಲದರ ಮಧ್ಯೆ ಕಾಡುವ ಒಂದೇ ಪ್ರಶ್ನೆ ಆ ಹಳೆಯ ನೋಟುಗಳನ್ನು ಆರ್.ಬಿ.ಐ. ಏನು ಮಾಡಿತು ಎಂಬುದಾಗಿದೆ.
ಹಳೆಯ ನೋಟುಗಳೊಂದಿಗೆ ಆರ್.ಬಿ.ಐ. ಹಾಗೂ ಸರ್ಕಾರ ಏನು ಮಾಡಿದೆ..? ಈ ನೋಟುಗಳನ್ನು ಆರ್.ಬಿ.ಐ. ಮರುಬಳಕೆ ಮಾಡಿತೇ..? ಅಥವಾ ಇನ್ನೇನಾದರೂ ಇದೆಯೇ..? ಎಂಬ ಪ್ರಶ್ನೆ ಹಲವರನ್ನು ಕಾಡಿದ್ದಿರಬಹುದು.
ಆರ್.ಬಿ.ಐ. ಅಧಿಕಾರಿಗಳು ಈ ಹಿಂದೆ ನೀಡಿದ ಹೇಳಿಕೆಗಳ ಪ್ರಕಾರ, ಬ್ಯಾಂಕ್ಗಳಿಂದ ಸಂಗ್ರಹಿಸಲಾದ ಅಮಾನ್ಯೀಕರಣಗೊಂಡ ನೋಟುಗಳನ್ನು ಕರೆನ್ಸಿ ಪರಿಶೀಲನೆ ಹಾಗೂ ಸಂಸ್ಕರಣಾ ವ್ಯವಸ್ಥೆಯ ಮೂಲಕ ಸಂಸ್ಕರಿಸಲಾಗುತ್ತದೆ. ಇದು ನೈಜ ಹಾಗೂ ನಕಲಿ ನೋಟುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ.
ಅಮಾನ್ಯಗೊಳಿಸಲಾದ ನೋಟುಗಳನ್ನು ನಂತರ ಚೂರುಚೂರು ಮಾಡಿ ಬ್ರಿಕೆಟ್‌ಗಳಾಗಿ ಪರಿವರ್ತಿಸಲಾಗುತ್ತದೆ, ಅವು ಸಂಕುಚಿತ ತ್ಯಾಜ್ಯದ ಬ್ಲಾಕ್ಗಳಾಗಿವೆ. ಅದನ್ನು ಬ್ರಿಕೆಟ್‌ಗಳಾಗಿ ಪರಿವರ್ತಿಸಿದ ನಂತರ, ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ. ತದನಂತರ ಆ ಬ್ರಿಕೆಟ್ಗಳನ್ನು ಕಾರ್ಡ್‌ಬೋರ್ಡ್ ಮತ್ತು ಪೇಪರ್ ತಯಾರಕರಿಗೆ ಮಾರಲಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಆರ್.ಬಿ.ಐ. ಸ್ವೀಕರಿಸಿದ ಹಳೆಯ ನಿಷೇಧಿತ ನೋಟುಗಳನ್ನು ಚೂರುಚೂರು ಮಾಡಿ ಸಂಯೋಜಿತ ತ್ಯಾಜ್ಯದ ಬ್ಲಾಕ್‌ಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ನಂತರ ಟೆಂಡರ್‌ಗಳ ಪ್ರಕಾರ ಕಾರ್ಡ್‌ಬೋರ್ಡ್ ಮತ್ತು ಪೇಪರ್ ತಯಾರಕರಿಗೆ ಮಾರಲಾಗುತ್ತದೆ.