ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಮಕ್ಕಳಿಗೂ ಆರಾಮವಾಗಿ ಬಳಸಬಹುದಾದಷ್ಟು ಸರಳಗೊಂಡಿರುವುದು ಒಂದು ರೀತಿಯಲ್ಲಿ ಲಾಭ, ಸ್ವಲ್ಪ ಯಾಮಾರಿದರೆ ಭಾರೀ ತೊಂದರೆ ಎನಿಸುವಂತೆ ಆಗಿಬಿಟ್ಟಿದೆ.
ಅಮೆರಿಕದ ಮಸ್ಸಾಚುಸೆಟ್ಸ್‌ನ ಲಿಲಾ ವರಿಸ್ಕೋ ಎಂಬ ಐದು ವರ್ಷದ ಬಾಲೆಯೊಬ್ಬಳು ತನ್ನ ತಾಯಿಯ ಸ್ಮಾರ್ಟ್‌ಫೋನ್‌ನಲ್ಲಿ ಆಟವಾಡುತ್ತಿದ್ದ ವೇಳೆ, ಅಮೇಜ಼ಾನ್ ಖಾತೆ ತೆರೆದು $3,000 ಮೌಲ್ಯದ ಶಾಪಿಂಗ್ ಮಾಡಿಬಿಟ್ಟಿದ್ದಾಳೆ. 10 ಮೋಟರ್ ಸೈಕಲ್‌ಗಳು ಹಾಗೂ 10 ಜೊತೆ ಕೌಗರ್ಲ್ ಬೂಟ್‌ಗಳನ್ನು ಈ ಆರ್ಡರ್ ಒಳಗೊಂಡಿದೆ.
ಬೈಕ್‌ಗಳು ಮತ್ತು ಜೀಪುಗಳು ಸುಮಾರು $3,180ರಷ್ಟಾದರೆ, ಬೂಟುಗಳೇ ಸುಮಾರು $600ರಷ್ಟಾಗಿದೆ ಎಂದು ಮಗುವಿನ ತಾಯಿ ಜೆಸ್ಸಿಕಾ ತಿಳಿಸಿದ್ದಾರೆ.
ಅಮೇಜ಼ಾನ್ ಅಪ್ಲಿಕೇಶನ್‌ನಲ್ಲಿದ್ದ “Buy Now” ಕ್ಲಿಕ್ ಮಾಡುವ ಮೂಲಕ ಸಲೀಸಾಗಿ ಈ ಆಟಿಕೆಗಳು ಹಾಗೂ ಬೂಟುಗಳನ್ನು ಖರೀದಿ ಮಾಡಿದ್ದಾಳೆ ಮಗಳು ಎಂದು ಜೆಸ್ಸಿಕಾ ತಿಳಿಸುತ್ತಾರೆ.
ಮಕ್ಕಳ ಮೋಟರ್‌ಸೈಕಲ್‌ಗಳನ್ನು ಹಿಂದಿರುಗಿಸಲು ಸಾಧ್ಯವಾಗಿಲ್ಲ ಎನ್ನುವ ಜೆಸ್ಸಿಕಾ, ಮಗಳ ಈ ಅವಾಂತರದಿಂದ ಕೋಪಗೊಳ್ಳದೇ, ಇದೊಂದು ಕಲಿಕಾ ಅನುಭವ ಎಂದು ಪರಿಗಣಿಸಿದ್ದಾರೆ.
“ಬಹುಶಃ ಆಕೆ ಮನೆಯಲ್ಲಿ ಒಂದಷ್ಟು ಕೆಲಸ ಮಾಡಿ, ಸರಿಯಾದ ರೀತಿಯಲ್ಲಿ ವರ್ತಿಸಿದರೆ, ಆಕೆಯ ವಯಸ್ಸಿಗನುಗುಣವಾದ ಬೈಕ್ ಖರೀದಿಸಿ ಕೊಡಬಹುದು ಎಂದು ಆಕೆಗೆ ತಿಳಿಸಿದ್ದೇನೆ,” ಎಂದು ಜೆಸ್ಸಿಕಾ ತಿಳಿಸಿದ್ದಾರೆ.