ಉತ್ತರಾಖಂಡ ಪ್ರವಾಸಿಗರ ಸ್ವರ್ಗ. ಸುಂದರವಾದ ಕಣಿವೆಗಳು, ಎತ್ತರದ ಪರ್ವತಗಳು, ಶಾಂತ ಸರೋವರಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಇದು ಹೆಸರುವಾಸಿಯಾಗಿದೆ. ನೈನಿತಾಲ್, ಮಸ್ಸೂರಿ, ಹಲ್ದ್ವಾನಿ ಮತ್ತು ಋಷಿಕೇಶದಂತಹ ಜನಪ್ರಿಯ ಪ್ರವಾಸಿ ತಾಣಗಳು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಉತ್ತರಾಖಂಡದಲ್ಲಿ ಇದುವರೆಗೆ ಹೆಚ್ಚು ಪ್ರಚಾರ ಪಡೆಯದೇ ಇರುವ ಅನೇಕ ಅದ್ಭುತ ತಾಣಗಳೂ ಇವೆ. ಜನಸಂದಣಿಯಿಲ್ಲದ ಶಾಂತ ಮತ್ತು ನೈಸರ್ಗಿಕ ಪರಿಸರವನ್ನು ಆನಂದಿಸಲು ಬಯಸುವವರು ಉತ್ತರಾಖಂಡದ ಈ ಆಫ್‌ಬೀಟ್ ಸ್ಥಳಗಳಿಗೆ ಭೇಟಿ ನೀಡಬಹುದು.
ಮುನ್ಸಿಯಾರಿ
ಮುನ್ಸಿಯಾರಿಯನ್ನು ‘ಛೋಟಾ ಕೈಲಾಶ್’ ಎಂದೂ ಕರೆಯುತ್ತಾರೆ. ಇದು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿರುವ ಸುಂದರವಾದ ಗಿರಿಧಾಮ. ಹಿಮಾಲಯದ ಎತ್ತರದ ಶಿಖರಗಳಿಂದ ಸುತ್ತುವರೆದಿರುವ ಮುನ್ಸಿಯಾರಿ ಚಾರಣ ಮತ್ತು ಪರ್ವತಾರೋಹಣ ಪ್ರಿಯರಿಗೆ ಸ್ವರ್ಗವಿದ್ದಂತೆ. ಇಲ್ಲಿ ಪಂಚುಲಿ ಶಿಖರದ ಅದ್ಭುತ ನೋಟಗಳನ್ನು ಆನಂದಿಸಬಹುದು.
ಕೌಸಾನಿ
ಕೌಸಾನಿಯನ್ನು ‘ಭಾರತದ ಸ್ವಿಟ್ಜರ್ಲೆಂಡ್’ ಎಂದೂ ಕರೆಯುತ್ತಾರೆ. ಇದು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಸುಂದರ ಗ್ರಾಮ. ಹಿಮಾಲಯದ ಎತ್ತರದ ಶಿಖರಗಳ ಸುಂದರವಾದ ನೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಂದ ತ್ರಿಶೂಲ್, ನಂದಾದೇವಿ ಮತ್ತು ಇತರ ಶಿಖರಗಳನ್ನು ಕಣ್ತುಂಬಿಕೊಳ್ಳಬಹುದು.
ಸೋಹಂ ಹಿಮಾಲಯನ್ ಸೆಂಟರ್
ಸೋಹಮ್ ಹಿಮಾಲಯನ್ ಕೇಂದ್ರ, ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿದೆ. ಧ್ಯಾನ ಮತ್ತು ಯೋಗವನ್ನು ಕಲಿಯಲು ಇದು ಉತ್ತಮ ಸ್ಥಳ. ಇಲ್ಲಿ ಆಧ್ಯಾತ್ಮಿಕ ಶಾಂತಿಯನ್ನು ಕಾಣಬಹುದು.
ಜಾಗೇಶ್ವರ ಧಾಮ
ಜಾಗೇಶ್ವರ ಧಾಮವು ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿರುವ 124 ದೇವಾಲಯಗಳ ಸಮೂಹ. ಇದು ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಪ್ರಾಚೀನ ದೇವಾಲಯಗಳ ಕರಕುಶಲತೆಯನ್ನು ನೋಡಬಹುದು ಮತ್ತು ಧಾರ್ಮಿಕ ಮಹತ್ವವನ್ನು ತಿಳಿದುಕೊಳ್ಳಬಹುದು.
ನೌಕುಚಿಯಾತಲ್
ನೌಕುಚಿಯಾತಲ್ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿರುವ ಸುಂದರವಾದ ಸರೋವರ. ಒಂಬತ್ತು ಮೂಲೆಗಳಿಂದಾಗಿ ಈ ಸರೋವರವು ಪ್ರಸಿದ್ಧಿ ಪಡೆದಿದೆ. ಇಲ್ಲಿ ಬೋಟಿಂಗ್, ಟ್ರೆಕ್ಕಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ನಂತಹ ಸಾಹಸ ಚಟುವಟಿಕೆಗಳನ್ನುಆನಂದಿಸಬಹುದು.