ಲೂಧಿಯಾನ: ಪಂಜಾಬ್ ನ ಲೂಧಿಯಾನ ನಗರದ ಸಮೀಪ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನವವಿವಾಹಿತೆ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಮಾಲ್ ವೊಂದರ ಬಳಿ ಎಸೆದು ಹೋಗಿದ್ದಾರೆ.
ಕಲಾನ್ ಗ್ರಾಮದ ಬಳಿ ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಶಾಪಿಂಗ್ ಮಾಲ್ ಸಮೀಪ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೈಬೋವಲ್ ಗ್ರಾಮದ ನಿವಾಸಿಯಾಗಿರುವ ಮಹಿಳೆ ಮೆಹಂದಿ ಹಾಕುವ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಮದುವೆಯಾಗಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಮೆಹಂದಿ ಹಚ್ಚಲು ಹೋಗಿದ್ದ ವೇಳೆಯಲ್ಲಿ ಘಟನೆ ನಡೆದಿದೆ.
ಗ್ರ್ಯಾಂಡ್ ವಾಕ್ ಮಾಲ್ ನಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ಮೆಹಂದಿ ಹಚ್ಚಲು ತೆರಳಿದ್ದ ಆಕೆಯನ್ನು ಕಲಾನ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ದುಷ್ಕರ್ಮಿಗಳು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಮೆಹಂದಿ ಹಚ್ಚಬೇಕಿದೆ ಎಂದ ಕಾರಣ ಆಕೆಯೂ ಹಳ್ಳಿಗೆ ಹೋಗಿದ್ದಾಳೆ. ಆದರೆ ಆಕೆಗೆ ಬೆದರಿಕೆಯೊಡ್ಡಿ ಮನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ನಂತರ ಮಾಲ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆ ತನ್ನ ಪತಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಗುರ್ಬಾನ್ಸ್ ಸಿಂಗ್ ತಿಳಿಸಿದ್ದಾರೆ.