ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಗಾಜಿನ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಅವಘಢದಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶಾದ್ ನಗರದಲ್ಲಿರುವ ಫ್ಯಾಕ್ಟರಿಯಲ್ಲಿ ಸಂಜೆ 4.30 ರ ಸುಮಾರಿಗೆ ಟ್ಯಾಂಕ್ ಸ್ಫೋಟಗೊಂಡಿದೆ. ಪ್ರಕರಣದ ಪ್ರಾಥಮಿಕ ತನಿಖೆಯಿಂದ ಸ್ಫೋಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಸುಳಿವು ಸಿಕ್ಕಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ, ಕಾರ್ಮಿಕ, ಕೈಗಾರಿಕೆಗಳು ಮತ್ತು ವೈದ್ಯಕೀಯ ತಂಡಗಳು ಘಟನಾ ಸ್ಥಳದಲ್ಲಿಯೇ ಇದ್ದು ಸಮನ್ವಯದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.