ಹೈದರಾಬಾದ್: ತೆಲಂಗಾಣದ ಸೂರ್ಯಪೇಟ್ ಮುನಗಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಲ್ಲಿ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದೆ.
ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಮೃತರು ಮುನಗಲ್ ಹೊರವಲಯದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ತೆನ್ನೇರು ಪ್ರಮೀಳಾ(35), ಚಿಂತಕಾಯಲ ಪ್ರಮೀಳಾ(33), ಉದಯ ಲೋಕೇಶ್(8), ನರಗೋಣಿ ಕೋಟಯ್ಯ(55) ಮತ್ತು ಗುಂಡು ಜ್ಯೋತಿ(38) ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್‌ನಲ್ಲಿ ಕನಿಷ್ಠ 30 ಜನರು ಪ್ರಯಾಣಿಸುತ್ತಿದ್ದರು. ಟ್ರ್ಯಾಕ್ಟರ್ ತಪ್ಪು ಮಾರ್ಗದಲ್ಲಿ ಚಲಿಸಿ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ ವೇಳೆ ವೇಗವಾಗಿ ವಿಜಯವಾಡ ಕಡೆಗೆ ಹೋಗುತ್ತಿದ್ದ ಲಾರಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿದ್ದ 30 ಮಂದಿ ವಾಹನದಿಂದ ರಸ್ತೆಗೆ ಬಿದ್ದಿದ್ದಾರೆ. ಟ್ರಾಕ್ಟರ್ ಅನ್ನು ಹಲವಾರು ಮೀಟರ್ ಗಳವರೆಗೆ ವೇಗವಾಗಿ ಬಂದ ಲಾರಿ ಎಳೆದುಕೊಂಡು ಬಂದು ನಿಂತಿತು. ಮಾಹಿತಿ ಪಡೆದ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮುನಗಲ್ ವೃತ್ತ ನಿರೀಕ್ಷಕ ಆಂಜನೇಯುಲು ತಿಳಿಸಿದ್ದಾರೆ.