ಪಂಜಾಬ್‌ನ ಬಟಿಂಡಾದಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಬಸ್ ಅಪಘಾತ ಸಂಭವಿಸಿದೆ. ಫರೀದ್‌ಕೋಟ್-ಕೋಟ್‌ಕಪುರ ರಸ್ತೆಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ, ಬಸ್ ಕಾಳುವೆಗೆ ಉರುಳಿದೆ. ಈ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಫರೀದ್‌ಕೋಟ್‌ನ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
“ನ್ಯೂ ಡೀಪ್ ಟ್ರಾನ್ಸ್‌ಪೋರ್ಟ್” ಸಂಸ್ಥೆಗೆ ಸೇರಿದ ಈ ಬಸ್ ಗಿಡ್ಡರ್‌ಬಾಹಾದ ಎಎಪಿ ಶಾಸಕ ಹರ್ದೀಪ್ ಸಿಂಗ್ ಡಿಂಪಿ ಧಿಲ್ಲೋನ್ ಅವರಿಗೆ ಸೇರಿದ್ದು.
ಮೂಲಗಳ ಪ್ರಕಾರ, ಕಾಲುವೆ ಮೇಲಿನ ಸಣ್ಣ ಸೇತುವೆಯಲ್ಲಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ ನೀರಿಗೆ ಬಿದ್ದಿದೆ. ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಫರೀದ್‌ಕೋಟ್ ಡಿಸಿ ವಿನೀತ್ ಕುಮಾರ್ ಮತ್ತು ಎಸ್‌ಎಸ್‌ಪಿ ಪ್ರಜ್ಞಾ ಜೈನ್ ನೇತೃತ್ವದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರ ತಂಡಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ನಿಖರವಾದ ಸಾವಿನ ಸಂಖ್ಯೆ ಇನ್ನೂ ತಿಳಿದಿಲ್ಲವಾದರೂ, ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ, ಡಿಸೆಂಬರ್ 27, 2024 ರಂದು ಬಟಿಂಡಾ-ತಲ್ವಂಡಿ ಸಾಬೋ ರಸ್ತೆಯಲ್ಲಿ ಖಾಸಗಿ ಕಂಪನಿಯ ಬಸ್ ಚರಂಡಿಗೆ ಬಿದ್ದ ಪರಿಣಾಮ ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದರು.