ಅಹಮದಾಬಾದ್: ಗುಜರಾತ್ ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ವೈರಸ್ ಗೆ ಭಾನುವಾರ ಮತ್ತೆ ಐದು ಜನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಚಾಂದಿಪುರ ಸೋಂಕಿಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
ವಡೋದರಾ, ಮಹಿಸಾಗರ, ಖೇಡಾದಲ್ಲಿ ತಲಾ ಒಬ್ಬರು, ಬನಸ್ಕಾಂತಾದಲ್ಲಿ ಇಬ್ಬರು ಜಾಂದಿಪುರ ವೈರಸ್ ನಿಂದ ಮೃತಪಟ್ಟಿದ್ದಾರೆ. ಹೊಸದಾಗಿ 13 ಜನರಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.
ಅಹಮದಾಬಾದ್(2 ಸೋಂಕುಗಳು), ಅರಾವಳಿ(2), ಬನಸ್ಕಾಂತ(2), ಸುರೇಂದ್ರನಗರ(1), ಗಾಂಧಿನಗರ(1), ಖೇಡಾ(1), ಮೆಹ್ಸಾನಾ(1), ನರ್ಮದಾ(1), ವಡೋದರಾ(1), ಮತ್ತು ರಾಜ್‌ಕೋಟ್(1) ನಿಂದ ಹೊಸ ಶಂಕಿತ ಪ್ರಕರಣಗಳು ವರದಿಯಾಗಿವೆ.
ಚಾಂದಿಪುರ ವೈರಸ್ ತಡೆಗೆ ರಾಜ್ಯ ಸರ್ಕಾರ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕ ಸಿಂಪಡಣೆ ಮಾಡಿದ್ದು, 19000 ಸ್ಥಳಗಳಲ್ಲಿ ನಿರಂತರ ತಪಾಸಣೆ ನಡೆಸುತ್ತಿದೆ. ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಕೂಡ ಸೂಚನೆ ನೀಡಿದೆ. ಸೊಳ್ಳೆ, ನೊಣ, ಉಣ್ಣೆ ಹುಳುವಿನಿಂದ ಹರಡುವ ಫ್ಲೂ ರೀತಿಯ ಚಾಂದಿಪುರ ಸೋಂಕಿಗೆ ತುತ್ತಾದವರು ಕೆಮ್ಮು, ಜ್ವರ, ತಲೆನೋವು, ಮೆದುಳು ಊರಿಯೂತಕ್ಕೆ ಒಳಗಾಗುತ್ತಾರೆ.