ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ.
ಕಸೋಲ್ – ತೋಶ್ – ಖೀರ್ ಗಂಗಾ
ಇದು ಹಿಮಾಚಲ ಪ್ರದೇಶದಲ್ಲಿರುವ ಸುಂದರ ಸ್ಥಳ, ದೆಹಲಿಯಿಂದ 518 ಕಿಲೋ ಮೀಟರ್ ದೂರದಲ್ಲಿದೆ. ಭುಂತರ್ ಹಾಗೂ ಮಣಿಕರಣ್ ಮಧ್ಯೆ ಬರುವ ಪುಟ್ಟ ಹಳ್ಳಿ ಕಸೋಲ್. ಪಾರ್ವತಿ ಕಣಿವೆ ಮತ್ತು ಪಾರ್ವತಿ ನದಿಯ ವಿಹಂಗಮ ನೋಟ ಇಲ್ಲಿದೆ. ತೋಶ್ ನಿಂದ ಖೀರ್ಗಂಗಾವರೆಗೆ ನೀವು ಟ್ರಕ್ಕಿಂಗ್ ಮಾಡ್ಬಹುದು. ಸುಂದರ ಜಲಪಾತಗಳು, ವಿಶಿಷ್ಟ ಹೂಗಳ ರಾಶಿ, ಹಸಿರ ವನಸಿರಿ ನಿಮ್ಮ ಕಣ್ಣಿಗೆ ತಂಪು ನೀಡುತ್ತೆ. ಖೀರ್ ಗಂಗಾದಲ್ಲಿ ನೈಸರ್ಗಿಕ ಬಿಸಿ ನೀರಿನ ಬುಗ್ಗೆ ಇರೋದು ವಿಶೇಷ.
ವಸಿಂದ್ – ಮಹಾರಾಷ್ಟ್ರ
ಇದು ಮುಂಬೈನಿಂದ 62.8 ಕಿ.ಮೀ. ದೂರದಲ್ಲಿದೆ. ವಸಿಂದ್ ನಲ್ಲಿ ಸೂರ್ಯಾಸ್ತವನ್ನು ನೋಡಲು ಎರಡು ಕಣ್ಣು ಸಾಲದು. ನದಿಯ ಕಿನಾರೆಯಲ್ಲಿ ಕುಳಿತು ಹೊಂಬಣ್ಣದ ಸೂರ್ಯನನ್ನು ವೀಕ್ಷಿಸುತ್ತ ನೀವು ಕನಸಿನ ಅಲೆಯಲ್ಲಿ ತೇಲಬಹುದು. Bhatsai ನದಿಯಲ್ಲಿ ಈಜಾಡಬಹುದು, ಮೀನು ಹಿಡಿದು ಎಂಜಾಯ್ ಮಾಡ್ಬಹುದು.
ವರ್ಕಳ- ಕೇರಳ
ಇದು ಕೊಚ್ಚಿನ್ ನಿಂದ 160 ಕಿ.ಮೀ. ದೂರದಲ್ಲಿದೆ. ಕೇರಳದ ಪಶ್ಚಿಮ ಕರಾವಳಿಯಲ್ಲಿರುವ ಸಣ್ಣ ಪಟ್ಟಣವಿದು. ಪ್ರವಾಸಿಗರಿಗೆ ಇಷ್ಟವಾಗುವಂತಹ ಪ್ರಶಾಂತವಾದ ಸ್ಥಳ. ಸ್ವಚ್ಛ, ಸುಂದರ ಬೀಚ್, ದುಬಾರಿಯಲ್ಲದ ಅದ್ಭುತ ರೆಸಾರ್ಟ್ ಗಳು ವರ್ಕಳದಲ್ಲಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನೀವು ಕೇರಳದ ಆಯುರ್ವೇದಿಕ್ ಮಸಾಜ್ ಕೂಡ ಮಾಡಿಸಿಕೊಳ್ಳಬಹದು.
ಕೊಡೈಕೆನಾಲ್ – ತಮಿಳುನಾಡು
ಕೊಡೈಕೆನಾಲ್ ಚೆನ್ನೈನಿಂದ 529 ಕಿಮೀ ದೂರದಲ್ಲಿದೆ. ಕೊಡೈಕೆನಾಲ್ ಅಂದ್ರೆ ಕಾಡಿನ ಉಡುಗೊರೆ ಎಂದರ್ಥ. ಪಳನಿ ಬೆಟ್ಟದಲ್ಲಿರುವ ಕೊಡೈಕೆನಾಲ್ ಚೇತೋಹಾರಿ ತಾಣ. ತಮಿಳುನಾಡಿನ ಬಿರು ಬಿಸಿಲಿನಿಂದ ಮುಕ್ತಿ ನೀಡುತ್ತೆ. ಇಲ್ಲಿನ ಪ್ರಮುಖ ಆಕರ್ಷಣೆ ದಟ್ಟ ಕಾಡಿನ ನಡುವೆ ಇರುವ ಸುಂದರ ಸರೋವರ. ಪ್ರಕೃತಿಯ ಸೌಂದರ್ಯ ಸವಿಯಲು ಹೇಳಿ ಮಾಡಿಸಿದಂತ ಜಾಗ.
ಚಂಡಿಪುರ್ – ಒಡಿಶಾ
ಚಂಡಿಪುರ್ ಕೋಲ್ಕತ್ತಾದಿಂದ 265 ಕಿ.ಮೀ. ದೂರದಲ್ಲಿದೆ. ಬಲೇಸ್ವರ್ ಜಿಲ್ಲೆಯಲ್ಲಿರುವ ಚಂಡಿಪುರ್ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಶಾಂತ ಸ್ಥಳ. ರಮ್ಯ ಮನೋಹರವಾದ ಬೀಚ್ ಇಲ್ಲಿದೆ. ದಿನದಲ್ಲಿ ಎರಡು ಬಾರಿ ಬೆಳ್ಳಿಯಂತೆ ಹೊಳೆಯುವ ಬೀಚ್ ನಲ್ಲಿ ಎಲೆಯಾಕಾರದ ಅಚ್ಚುಗಳನ್ನು ಕಾಣಬಹುದು. ಬಲರಾಮ್ಗಢಿಯಲ್ಲಿ ಬುದ್ಧಬಳಂಗ್ ನದಿ ಸಮುದ್ರದಲ್ಲಿ ಸೇರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.