ಆಂಕಾರೇಜ್: ಅಲಾಸ್ಕಾದ ಅಂಕಾರೇಜ್ ಬಳಿ ಹಿಮನದಿಯಲ್ಲಿ ಹೆಲಿಕಾಫ್ಟರ್ ಪತನವಾಗಿದೆ. ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆಂದು ಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ತಿಳಿಸಿದ್ದಾರೆ.
ಅಲಾಸ್ಕಾದ ಅಂಕಾರೇಜ್ ಬಳಿಯ ಉತ್ತರ ಚುಗಾಚ್ ಪರ್ವತಗಳಲ್ಲಿನ ದೃಶ್ಯಗಳನ್ನು ವೀಕ್ಷಿಸಲು ಬೇಸಿಗೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪಾದಯಾತ್ರೆ ಮತ್ತು ಬೋಟಿಂಗ್ ಪ್ರವಾಸಗಳಿಗೆ ಇಂದು ಹೆಸರಾದ ತಾಣವಾಗಿದೆ.
ಆಂಕಾರೇಜ್ ನ ಈಶಾನ್ಯದ ನಿಕ್ ಗ್ಲೇಸಿಯರ್ಸ್ ಪ್ರದೇಶದ ನಿಕ್ ಹಿಮನದಿಯ ಮೇಲೆ ಹಾರಾಟದಲ್ಲಿದ್ದ ವೇಳೆಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಐದು ಮಂದಿ ಮೃತಪಟ್ಟಿದ್ದಾರೆ. ಅಲಸ್ಕಾ ಆರ್ಮಿ ನ್ಯಾಷನಲ್ ಗಾರ್ಡ್ ಮತ್ತು ಅಲಾಸ್ಕಾ ಮೌಂಟೇನ್ ವಿಪತ್ತು ನಿರ್ವಹಣ ತಂಡದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಿಂದ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಅಪಘಾತದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ಕೈಗೊಂಡಿದೆ.