ಮಕ್ಕಳು ಸಾಂತಾ ಟೋಪಿಗಳನ್ನು ಧರಿಸಿ, ಬ್ಯಾಂಡ್ಗಳನ್ನು ಬಾರಿಸುತ್ತಾ ಸಂಭ್ರಮದಲ್ಲಿದ್ದ ಕ್ರಿಸ್ಮಸ್ ಮೆರವಣಿಗೆಯು ಕ್ಷಣಾರ್ಧದಲ್ಲಿ ಮಾರಣಾಂತಿಕವಾಗಿ ಮಾರ್ಪಟ್ಟ ದಾರುಣ ಘಟನೆಯು ಅಮೆರಿಕದಲ್ಲಿ ನಡೆದಿದೆ. ಬ್ಯಾರಿಕೇಡ್ನ್ನು ಮುರಿದು ಎಸ್ಯುವಿ ಮೆರವಣಿಗೆ ನಡೆಯುತ್ತಿದ್ದ ಸ್ಥಳದ ಬಳಿ ನುಗ್ಗಿದ ಪರಿಣಾಮ ಕನಿಷ್ಟ ಐವರು ಸಾವನ್ನಪ್ಪಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ಸಂಬಂಧ ವಿವರಣೆ ನೀಡಿದ ಪೊಲೀಸ್ ಅಧಿಕಾರಿ ಥಾಂಪ್ಸನ್ ಅಪಘಾತಕ್ಕೆ ಕಾರಣವಾದ ವಾಹನವನ್ನು ವಶಪಡಿಸಿಕೊಂಡಿದ್ದೇವೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದ ಸಮೀಪ ತೆರಳದಂತೆ ಜನತೆಗೆ ಮನವಿ ಮಾಡಿದ್ದೇವೆ. ಅಪಘಾತದ ವಿಡಿಯೋವೊಂದು ದೊರಕಿದ್ದು ಇದರಲ್ಲಿ ಬ್ಯಾರಿಕೇಡ್ಗಳನ್ನು ಮುರಿದು ಕಾರು ಮೆರವಣಿಗೆಯತ್ತ ನುಗಿದ್ದು ಸ್ಪಷ್ಟವಾಗಿ ಗೋಚರವಾಗಿದೆ ಎಂದು ಹೇಳಿದ್ರು.
ಭಾನುವಾರ ಸಂಜೆ ಸುಮಾರಿಗೆ ಅಮೆರಿಕದ ವಿಸ್ಕಾನ್ಸಿನ್ ಎಂಬಲ್ಲಿ ಕ್ರಿಸ್ಮೆಸ್ ಮೆರವಣಿಗೆ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿತ್ತು. ಮಕ್ಕಳು ಸೇರಿದಂತೆ ಅನೇಕರು ಕ್ರಿಸ್ಮಸ್ ಮೆರವಣಿಗೆಯಲ್ಲಿ ತೊಡಗಿದ್ದ ವೇಳೆ ಬ್ಯಾರಿಕೇಡ್ಗಳನ್ನು ಮುರಿದು ಬಂದ ಕಾರು ಜನರಿಗೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡವರ ಪೈಕಿ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.