ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಪೊಲೀಸರು ಬರೋಬ್ಬರಿ 5 ಕೋಟಿ ರೂಪಾಯಿಗೂ ಅಧಿಕ ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಆದರೆ ಆ ಎಲ್ಲಾ ನೋಟಿಗಳಿಗೆ ಪೊಲೀಸರು ಬೆಂಕಿ ಹಚ್ಚಿ ನಾಶಪಡಿಸಲು ಮುಂದಾಗಿದ್ದಾರೆ.
ಜಪ್ತಿ ಮಾಡಿದ್ದ ಹಳೇ ನೋಟುಗಳನ್ನು ಆರ್ ಬಿಐ ಗೆ ನೀಡಿ ನೋಟು ಬದಲಾವಣೆಗೆ ಪೊಲೀಸರು ಮುಂದಾಗಿದ್ದರು. ಆದರೆ ಆರ್ ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಹಾಗಾಗಿ ಹಳೇ ನೋಟುಗಳಿಗೆ ಬೆಂಕಿ ಹಚ್ಚಲು ಪೊಲೀಸರು ತೀರ್ಮಾನಿಸಿದ್ದು, ಕೋರ್ಟ್ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
1000 ಹಾಗೂ 500 ಮುಖ ಬೆಲೆಯ ಸುಮಾರು 5 ಕೋಟಿಗೂ ಅಧಿಕ ಹಳೇಯ ನೋಟಿನ ಕಂತೆಯೇ ಬೆಂಗಳೂರು ಪೊಲೀಸರ ಬಳಿ ಇದೆ. ಆದರೆ ಈ ನೋಟುಗಳಿಗೆ ಈಗ ನಯಾಪೈಸೆ ಬೆಲೆ ಇಲ್ಲ. ಈ ಎಲ್ಲಾ ನೋಟುಗಳು ಬರಿ ಕಾಗದದ ಚೂರುಗೆ ಸಮ. ಬ್ಯಾನ್ ಆಗಿರುವ ಈ ನೋಟುಗಳು ಈಗ ಕಾಗದದ ಚೂರಿಗೆ ಸಮ. ಇವುಗಳಿಗೆ ಬೆಲೆ ಇಲ್ಲ ಎಂದು ಸ್ವತಃ ಆರ್ ಬಿಐ ಸ್ಪಷ್ಟಪಡಿಸಿದೆ.
ಈ ಹಿಂದೆ ಆರ್ ಬಿಐ ಅಮಾನ್ಯಗೊಂಡ ಹಳೇ ನೋಟುಗಳ ಬದಲಾವಣೆಗೆ ಕಾಲವಾಕಶ ಕೊಟ್ಟಿತ್ತು. ಆದರೆ ಈಗ ಆ ಎಲ್ಲಾ ಅವಕಾಶಗಳು ಮುಗಿದಿವೆ. ಹಳೆ ನೋಟನ್ನು ಸ್ವೀಕರಿಸಲು ಆರ್ ಬಿಐ ಕೂಡ ಒಪ್ಪುತ್ತಿಲ್ಲ. ಈ ಹಳೇ ನೋಟುಗಳನ್ನು ಪೊಲೀಸರು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲೂ ಆಗುತ್ತಿಲ್ಲ, ಅತ್ತ ಆರ್ ಬಿಐ ಕೂಡ ಸ್ವೀಕರಿಸುತ್ತಿಲ್ಲ. ಹಾಗಾಗಿ ಹಳೇನೋಟುಗಳನ್ನು ನಾಶಪಡಿಸಲು ಸುಟ್ಟುಹಾಕುವ ತೀರ್ಮಾನಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.