ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 6 ರವರೆಗೆ ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ಬೆಂಗಳೂರಿನ 3 ನೇ ಎಸಿಎಂಎಂ ಕೋರ್ಟ್ ಇಂದು ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್ ಕಡೂರು, ನಾಲ್ಕನೇ ಆರೋಪಿ ರಮೇಶ್ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್ ಆರನೇ ಆರೋಪಿ ಧನರಾಜ್ ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ಕೋರ್ಟ್ ಸೂಚನೆ ನೀಡಿದೆ.
ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿಸಲ್ಪಟ್ಟಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರಳ ಹೊಸ ಹೊಸ ಪ್ರಕರಣಗಳು ದಿನವೂ ಹೊರಬರುತ್ತಿದೆ. ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು.
ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹಣ ಪಡೆದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ . ಸಿಸಿಬಿ ಪೊಲೀಸರ ವಿಚರಣೆ ವೇಳೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಹಣ ಪಡೆದುಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿವೆ. ಆದರೆ 5 ಕೋಟಿಯಲ್ಲ 3 ಕೋಟಿ ಹಣ ಪಡೆದಿರುವುದಾಗಿ ಬಾಯ್ಬಿಟ್ಟಿದ್ದಾರೆ. ಪ್ರಕರಣದ 7ನೇ ಆರೋಪಿಯಾಗಿರುವ ಶ್ರೀಕಾಂತ್, ಉದ್ಯಮಿ ಗೋವಿಂದ ಪೂಜಾರಿ ಬಳಿಯಿಂದ ಹಣ ಪಡೆದಿದ್ದು, ಸಿಸಿಬಿ ವಿಚಾರಣೆ ವೇಳೆ ಉದ್ಯಮಿಯಿಂದ ಹಣ ಪಡೆದಿದ್ದು ನಾನೇ. ಆದರೆ 5ಕೋಟಿಯಲ್ಲ 3 ಕೋಟಿ ಹಣ ಪಡೆದಿದ್ದಾಗಿ ಹೇಳಿರುವುದಾಗಿ ತಿಳಿದುಬಂದಿದೆ.