ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮಗಳ ಮೇಲೆ ಪೊಲೀಸರು ಹಾಗೂ ಚುನಾವಣಾ ಆಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಆದಾಗ್ಯೂ ಮತದಾರರಿಗೆ ಆಮಿಷವೊಡ್ಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಕಸರತ್ತು ನಡೆಸಿದ್ದು, ಕೋಟಿ ಕೋಟಿ ಹಣ, ಗಿಫ್ಟ್, ಮದ್ಯಗಳನ್ನು ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ.
ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 5 ಕೋಟಿ 60 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿರುವ ಘಟನೆ ಬಳ್ಳಾರಿ ನಗರದ ಕಂಬಳಿ ಬಜಾರ್ ನಲ್ಲಿ ನಡೆದಿದೆ.
ಯಾವುದೇ ಸೂಕ್ತ ದಾಖಲೆಗಳಿಲ್ಲದ ಹಣ ಹಾಗೂ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ದಾಖಲೆ ಇಲ್ಲದೇ ಹಣ ಹಾಗೂ ಚಿನ್ನಾಭರಣ ಸಾಗಿಸಲಾಗುತ್ತಿತ್ತು. ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದಾಗ 5 ಕೋಟಿ 60 ಲಕ್ಷ ಹಣ ಪತ್ತೆಯಾಗಿದೆ.
ಒಟ್ಟು 3 ಕೆಜಿ ಚಿನ್ನ, 68 ಕೆ.ಜಿ.ಬೆಳ್ಳಿ ಗಟ್ಟಿ ಹಾಗೂ 103 ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳು ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಹಣ, ಚಿನ್ನಾಭರಣಗಳನ್ನು ಜಪ್ತಿ ಮಾಡಿ, ಅಕ್ರಮವಾಗಿ ಹಣ ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬ್ರೂಸ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.