ವ್ಯಕ್ತಿಯೊಬ್ಬರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರಿಗೆ ಮಾತನಾಡಲು ಹಾಗೂ ನಡೆದಾಡಲು ಕೂಡ ಆಗುತ್ತಿರಲಿಲ್ಲ. ಹೀಗಾಗಿ ಅವರ ಜೀವನವೆಲ್ಲ ಹಾಸಿಗೆಯಲ್ಲಿಯೇ ಎನ್ನುವಂತಾಗಿತ್ತು. ಆದರೆ, ಕೊರೊನಾ ಲಸಿಕೆ ಪಡೆಯುತ್ತಿದ್ದಂತೆ ಅವರು ಮತ್ತೆ ಮೊದಲಿನಂತೆ ಆಗಿದ್ದಾರೆ.
ಇದು ಆಶ್ಚರ್ಯವಾದರೂ ಸತ್ಯ. ಜಾರ್ಖಂಡ್ ನ ಬೊಕಾರೊ ಜಿಲ್ಲೆಯ ಸಲ್ಗಾಡಿ ಎಂಬ ಗ್ರಾಮದ ದುಲರ್ ಚಂದ್ ಮುಂಡಾ ಎಂಬ ವ್ಯಕ್ತಿಯೇ ಪವಾಡ ಎಂಬಂತೆ ಎದ್ದು ಕುಳಿತವರು. ಇವರು ಜ. 4ರಂದು ಕೋವಿಶೀಲ್ಡ್ ನ ಮೊದಲ ಡೋಸ್ ಪಡೆದಿದ್ದರು. ಹಾಸಿಗೆಯ ಮೇಲೆ ಮಲಗಿಕೊಂಡು ಅವರು ಲಸಿಕೆ ಪಡೆದಿದ್ದರು. ಆದರೆ, ಇದೀಗ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಹ ಪವಾಡ ನಡೆದಿದ್ದು, ಅವರು ಎಂದಿನಂತೆ ಮಾತನಾಡುತ್ತಿದ್ದಾರೆ ಹಾಗೂ ನಡೆದಾಡುತ್ತಿದ್ದಾರೆ.
ಲಸಿಕೆ ಹಾಕಿಸಿಕೊಂಡ ಮರು ದಿನವೇ ಮುಂಡಾ ಅವರು ನಡೆದಾಡಲು ಹಾಗೂ ಮಾತನಾಡಲು ಆರಂಭಿಸಿದ್ದಾರೆ. ಮುಂಡಾಗೆ ಬೆನ್ನು ನೋವು ಹೆಚ್ಚಾಗಿ ಕಾಡುತ್ತಿತ್ತು. ಆದರೆ, ಸದ್ಯ ಬೆನ್ನು ನೋವು ಕೂಡ ಇಲ್ಲವಾಗಿದೆ. ಈ ಕುರಿತು ಬೊಕಾರೊದ ಸಿವಿಲ್ ಸರ್ಜನ್ ಡಾ. ಜಿತೇಂದ್ರ ಕುಮಾರ್ ಅವರು ಈ ಕುರಿತು ಅಧ್ಯಯನ ನಡೆಸಲು ತಂಡ ಕೂಡ ರಚಿಸಿದ್ದಾರೆ.
ಇದಕ್ಕೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದು, ದೇವರೇ ಕೋವಿಶೀಲ್ಡ್ ರೂಪದಲ್ಲಿ ಅವನಿಗೆ ಜೀವದಾನ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.