5 ಮತ್ತು 8ನೇ ತರಗತಿಗಳಿಗೆ ಕಡ್ಡಾಯ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ, ಡಿ. ಶಶಿಕುಮಾರ್ ಅವರು ನೀಡಿರುವ ಹೇಳಿಕೆ.
ರಾಮನಗರದ ಆರ್ ವಿ ಸಿ ಎಸ್ ಕಲ್ಯಾಣಮಂಟಪದಲ್ಲಿ ನಡೆದ ರಾಮನಗರ ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ಈ ವೇಳೆ 5 ಮತ್ತು 8ನೇ ತರಗತಿಗಳಿಗೆ ಕಡ್ಡಾಯ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎಂದ ಅವರು, ಅಲ್ಲದೆ ಆರ್.ಟಿ.ಇ. ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಮುಂದಾಗಿದ್ದು, ಈ ಆದೇಶ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.