ದೇಶದಲ್ಲಿ ಈಗಾಗಲೇ ಮೊದಲು 2ಜಿ, ಬಳಿಕ 3ಜಿ ಮತ್ತು ಈಗ 4 ಜಿ ಬಳಕೆಯಲ್ಲಿದ್ದು, 5ಜಿ ನೆಟ್ವರ್ಕ್ ಲಭ್ಯವಾದರೆ ಇಂಟರ್ನೆಟ್ ಮತ್ತಷ್ಟು ವೇಗಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಮೊಬೈಲ್ ಬಳಕೆದಾರರಿದ್ದರು. ಇದೀಗ ಅವರಿಗಾಗಿ ಶುಭ ಸುದ್ದಿಯೊಂದು ಇಲ್ಲಿದೆ.
ಗುರುವಾರದಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ವದೇಶಿ ಸಾಧನ ಬಳಸುವ ಮೂಲಕ 5ಜಿ ನೆಟ್ವರ್ಕ್ ನಲ್ಲಿ ಮೊದಲ ಕರೆ ಮಾಡಿದ್ದಾರೆ. ಈ ನೆಟ್ವರ್ಕ್ ಅನ್ನು ಪ್ರಾಯೋಗಿಕವಾಗಿ ಐಐಟಿ ಮದ್ರಾಸ್ ನಲ್ಲಿ ಅಳವಡಿಸಲಾಗಿತ್ತು.
ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿಸಿರುವ ಸಚಿವರು, ಆತ್ಮ ನಿರ್ಭರ 5 ಜಿ. ಈ ಪರೀಕ್ಷೆಯನ್ನು ಐಐಟಿ ಮದ್ರಾಸ್ ನಲ್ಲಿ ನಾನು ಯಶಸ್ವಿಯಾಗಿ ಮಾಡಿದ್ದೇನೆ. ಇದನ್ನು ಭಾರತದಲ್ಲಿಯೇ ರೂಪಿಸಿ, ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
5ಜಿ ಸೇವೆಗಳು ದೇಶದಾದ್ಯಂತ ವಾಣಿಜ್ಯಕವಾಗಿ ಆಗಸ್ಟ್ – ಸೆಪ್ಟೆಂಬರ್ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಐಐಟಿ ಮದ್ರಾಸ್ ನೇತೃತ್ವದಲ್ಲಿ ಈ ಸಾಧನವನ್ನು ಎಂಟು ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.