ದುಬೈನಲ್ಲಿ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. 400 ಟರ್ಮಿನಲ್‌ಗಳು, 26 ಕೋಟಿ ಪ್ರಯಾಣಿಕರ ಸಾಮರ್ಥ್ಯ, 5 ರನ್‌ವೇಗಳನ್ನು ಹೊಂದಿರುವ ಈ ವಿಮಾನ ನಿಲ್ದಾಣವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ 5 ಪಟ್ಟು ದೊಡ್ಡದಾಗಿದೆ.
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ದುಬೈನಲ್ಲಿ ತಲೆ ಎತ್ತಲಿರುವ ಈ ವಿಮಾನ ನಿಲ್ದಾಣದ ಹೆಸರು ಅಲ್ ಮಕ್ತೌಮ್ ಅಂತರಾಷ್ಟ್ರೀಯ ಏರ್‌ಪೋರ್ಟ್. ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಹೊಸ ವಿಮಾನ ನಿಲ್ದಾಣಕ್ಕೆ ಅನುಮೋದನೆ ನೀಡಿದ್ದಾರೆ.
ಅಲ್ ಮಕ್ತೌಮ್ ಅಂತರಾಷ್ಟ್ರೀಯ ಏರ್‌ಪೋರ್ಟ್ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದೆ. ಇದು 26 ಕೋಟಿ ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. 5 ರನ್‌ವೇಗಳಿರುವುದರಿಂದ 5 ವಿಮಾನಗಳು ಏಕಕಾಲದಲ್ಲಿ ಇಲ್ಲಿಂದ ಟೇಕ್ ಆಫ್ ಮತ್ತು ಲ್ಯಾಂಡ್ ಆಗಬಹುದು. 400 ಟರ್ಮಿನಲ್ ಗೇಟ್‌ಗಳು ಇಲ್ಲಿರಲಿವೆ. ಹೊಸ ವಿಮಾನ ನಿಲ್ದಾಣದ ನಿರ್ಮಾಣದ ನಂತರ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರವನ್ನು ಸಹ ಈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು.
70 ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿರುವ ವಿಮಾನ ನಿಲ್ದಾಣದ ಸುತ್ತಲೂ ನಗರವನ್ನು ನಿರ್ಮಿಸಲಾಗುವುದು. ಈ ನಗರದಲ್ಲಿ 10 ಲಕ್ಷ ಜನರಿಗೆ ವಸತಿ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.ಹೊಸ ವಿಮಾನ ನಿಲ್ದಾಣದ ನಿರ್ಮಾಣಕ್ಕೆ 35 ಬಿಲಿಯನ್ ಡಾಲರ್, ಅಂದರೆ ಸುಮಾರು 2.92 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಸಿದ್ಧವಾಗಲು 10 ವರ್ಷ ಬೇಕಾಗಬಹುದು. ದುಬೈ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅದರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಲ್ ಮಕ್ತೌಮ್ ವಿಮಾನ ನಿಲ್ದಾಣವು ದುಬೈ ವಿಮಾನ ನಿಲ್ದಾಣದಿಂದ 45 ಕಿ.ಮೀ ದೂರದಲ್ಲಿದೆ.
ದುಬೈ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವನ್ನು ಹೊಂದಿದೆ. 2019 ರಲ್ಲಿ ದುಬೈ ವಿಮಾನ ನಿಲ್ದಾಣದ ಮೂಲಕ ಸುಮಾರು 8.7 ಕೋಟಿ ಜನರು ಪ್ರಯಾಣಿಸಿದ್ದಾರೆ. 2018ರಲ್ಲಿ ಈ ಸಂಖ್ಯೆ 9 ಕೋಟಿಯಷ್ಟಿತ್ತು.