ನಾನೂರು ಅಡಿ ಆಳದ ಬೋರ್ ವೆಲ್‌ನಲ್ಲಿ ಸಿಲುಕಿದ್ದ ಬಾಲಕನನ್ನು ಸಾಹಸಿಯೊಬ್ಬ ರಕ್ಷಿಸಿದ್ದಾನೆ.
ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ತೆರೆದ ಬೋರ್‌ವೆಲ್‌ನಲ್ಲಿ 30 ಅಡಿ ಕೆಳಗೆ ಬಿದ್ದ ಒಂಬತ್ತು ವರ್ಷದ ಬಾಲಕನನ್ನು ಸ್ಥಳೀಯ ಯುವಕ ಐದು ಗಂಟೆಗಳ ಕಾರ್ಯಾಚರಣೆಯಲ್ಲಿ ಧೈರ್ಯದಿಂದ ರಕ್ಷಿಸಿದ್ದಾನೆ.
ಜಸ್ವಂತ್ ಎಂಬ ಬಾಲಕ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ರಾತ್ರಿ 7 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ. ಪೋಷಕರು ಆತನಿಗಾಗಿ ಹುಡುಕಾಡಿದರೂ ಪತ್ತೆಯಾಗಿಲ್ಲ.
ಸಹಾಯಕ್ಕಾಗಿ ಮಗುವಿನ ಕಿರುಚಾಟವನ್ನು ಕೇಳಿದ ನೆರೆಹೊರೆಯವರಿಗೆ ಬಾಲಕ ಸುಮಾರು 400 ಅಡಿ ಆಳದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ ಎಂಬುದು ಗಮನಕ್ಕೆ ಬಂದಿದೆ.
ಬಳಿಕ ಅವರು ಹಗ್ಗವನ್ನು ಬಾವಿಗೆ ಇಳಿಸಿ ಹುಡುಗ 30 ಅಡಿ ಕೆಳಗೆ ಸಿಲುಕಿಕೊಂಡಿರುವುದನ್ನು ಕಂಡುಕೊಂಡರು. ಬಳಿಕ ಸ್ಥಳೀಯ ನಿವಾಸಿ ಸುರೇಶ್ ಮಗುವನ್ನು ರಕ್ಷಿಸಲು ಮುಂದಾದನು. ಸುರೇಶ್ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು 0.25 ಮೀಟರ್‌ಗಿಂತಲೂ ಕಡಿಮೆ ವ್ಯಾಸದ ಕಿರಿದಾದ ರಂಧ್ರದ ಮೂಲಕ ಬೋರ್‌ವೆಲ್ ಒಳಗೆ ಇಳಿದೇ ಬಿಟ್ಟನು.
ಹುಡುಗ ಇರುವಲ್ಲಿ ತಲುಪಿದ ನಂತರ ಅವನ ಸೊಂಟಕ್ಕೆ ಹಗ್ಗ ಕಟ್ಟಿದನು. ಇತರರು ಅವರಿಬ್ಬರನ್ನೂ ಮೇಲಿದ್ದವರು ಸುರಕ್ಷಿತವಾಗಿ ಎಳೆದುಕೊಂಡರು. ರಕ್ಷಣಾ ಕಾರ್ಯಾಚರಣೆಯು ಸುಮಾರು ಐದು ಗಂಟೆಗಳ ಕಾಲ ನಡೆಯಿತು. ಜಸ್ವಂತ್‌ಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ವೇಳೆಗೆ ಗ್ರಾಮದ ಸ್ಥಳೀಯರು ಜಸ್ವಂತ್ ನನ್ನು ರಕ್ಷಿಸಿದ್ದರು.