ಮುಜಾಫರ್‌ಪುರ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ತೀವ್ರ ಸೋಂಕಿಗೆ ಒಳಗಾದ ಪರಿಣಾಮ 40 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ಪೀಡಿತ ಜನರ ಸಂಖ್ಯೆ 65ಕ್ಕೆ ಏರಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮುಜಾಫರ್‌ಪುರದ ಜುರಾನ್ ಚಾಪ್ರಾ ಪ್ರದೇಶದ ಕಣ್ಣಿನ ಆಸ್ಪತ್ರೆಯು ನವೆಂಬರ್ 22 ರಂದು ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿತ್ತು. ಪರೀಕ್ಷೆಯ ನಂತರ, 100 ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಯಿತು.
ನೇತ್ರ ತಜ್ಞ ಎನ್.ಡಿ.ಸಾಹು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆದರೆ, ಸಾಹು ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ ಅನುಭವ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ನಂತರ, ಹಲವಾರು ರೋಗಿಗಳು ಕಣ್ಣುಗಳಲ್ಲಿ ನೋವಿನ ಬಗ್ಗೆ ದೂರು ನೀಡಿದಾಗ, ಆಸ್ಪತ್ರೆಯ ಆಡಳಿತವು ಅವರಿಗೆ ನೋವು ನಿವಾರಕ ಚುಚ್ಚುಮದ್ದನ್ನು ನೀಡಿದೆ.
ಕಣ್ಣಿನ ಸೋಂಕಿನ ಹೆಚ್ಚಿನ ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಜಿಲ್ಲೆಯ ಅಂಧತ್ವ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ತಂಡವು ಆಸ್ಪತ್ರೆಯನ್ನು ಪರಿಶೀಲಿಸಿದೆ ಎಂದು ಮುಜಾಫರ್‌ಪುರದ ಸಿವಿಲ್ ಸರ್ಜನ್ ವಿನಯ್ ಕುಮಾರ್ ಶರ್ಮಾ ಹೇಳಿದ್ದಾರೆ.
ಇನ್ನು ಸಾಹು ಅವರ ಪರವಾನಗಿಯನ್ನು ರದ್ದುಗೊಳಿಸಲು ತಂಡವು ಶಿಫಾರಸು ಮಾಡಿದೆ. ಆಸ್ಪತ್ರೆಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ಹೇಳಿದ್ದಾರೆ.
ಘಟನೆಯ ನಂತರ, ಎಲ್ಲಾ 65 ಜನರು ಒಂದು ಕಣ್ಣು ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಮುಜಾಫರ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.