alex Certify ವಿದ್ಯುತ್ ಅವಘಡದಿಂದ ಕೈ ಕಳೆದುಕೊಂಡ ಬಾಲಕನಿಗೆ 40 ಲಕ್ಷ ಪರಿಹಾರ : ಕೋರ್ಟ್ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಅವಘಡದಿಂದ ಕೈ ಕಳೆದುಕೊಂಡ ಬಾಲಕನಿಗೆ 40 ಲಕ್ಷ ಪರಿಹಾರ : ಕೋರ್ಟ್ ಆದೇಶ.!

ಧಾರವಾಡ : ಫೆಬ್ರವರಿ 18, 2025 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ, ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ ಮತ್ತು ಉಮೇಶ ಎಮ್. ಅಡಿಗ ಅವರ ಧಾರವಾಡ ಪೀಠದ, ವಿಭಾಗೀಯ ಪೀಠವು ಆರ್ಎಫ್ಎ ನಂ:100610/2023 ಪ್ರಕರಣವನ್ನು ಮೇಲ್ಮನವಿದಾರ-ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ಜೆಸ್ಕಾಂ) ಮಂಡಳಿಯ ಸದಸ್ಯರು ತೆಗೆದುಕೊಂಡ ಒಂದು ನಿರ್ಣಯದ ಆಧಾರದ ಮೇಲೆ ವಿಲೇವಾರಿ ಮಾಡಿದ್ದು ಇದೊಂದು ವಿಶೇಷವಾದ ಪ್ರಕರಣವಾಗಿ ಮೂಡಿಬಂದಿರುತ್ತದೆ.

ಎದುರುದಾರ-ಒಂಬತ್ತು ವರ್ಷದ ಬಾಲಕ, ತನ್ನ ಅರಿವೆಗೆ ಬಾರದೆ ವಿದ್ಯುತ್ ಅಪಘಾತಕ್ಕೆ ಸಿಲುಕಿ, ತೀವ್ರ ಸುಟ್ಟ ಗಾಯಗಳಿಂದ ತನ್ನ ಬಲಗೈಯನ್ನು ಕಳೆದುಕೊಂಡು, ಶಾಶ್ವತ ಅಂಗವಿಕಲತೆಗೆ ಒಳಗಾಗಿ ತನ್ನ ಬದುಕು ಮತ್ತು ಭವಿಷ್ಯದ ಅನಿಶ್ಚಿತತೆಗೆ ಒಳಗಾದ ಸಂತ್ರಸ್ಥ.

ಈ ಘಟನೆಯಿಂದ ಆದ ಚಿಕಿತ್ಸಾ ವೆಚ್ಚ ಮತ್ತು ಪರಿಹಾರವನ್ನು ಪಡೆಯಲು ಬಾಲಕನ ತಂದೆಯು ನ್ಯಾಯಾಲಯದ ಮೊರೆ ಹೋಗುತ್ತಾನೆ. ಆಗ ನ್ಯಾಯಾಧೀಶರು ಘಟನೆಯ ತೀವ್ರತೆಯನ್ನು ಗಮನಿಸಿ, ಚಿಕಿತ್ಸಾ ವೆಚ್ಚ ಮತ್ತು ಪರಿಹಾರವನ್ನು ನೀಡುವಂತೆ ನಿಗಮಕ್ಕೆ ಆದೇಶಿಸಿ, ತೀರ್ಪನ್ನು ನೀಡುತ್ತಾರೆ.

ಸದರಿ ತೀರ್ಪನ್ನು ಪ್ರಶ್ನಿಸಿದ ನಿಗಮಕ್ಕೆ, ಕರ್ನಾಟಕ ಉಚ್ಛ-ನ್ಯಾಯಾಲಯ ಧಾರವಾಡ ಪೀಠದ ವಿಭಾಗೀಯ ಪೀಠವು ಮೇಲ್ಮನವಿಯಲ್ಲಿನ ಘಟನೆಯ ಸೂಕ್ಮತೆಯನ್ನು ಗಮನಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಅವರ ವಕೀಲರಾದ ಚಂದ್ರಶೇಖರ ಆರ. ಹಿರೇಮಠ ಮತ್ತು ಎದುರುದಾರ-ಯುವಕನ ಪರವಾಗಿ ಹಾಜರಾದ ಬಿ.ಎಸ್. ಸಂಗಟಿ ವಕೀಲರಿಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಪರಿಹರಿಸಿಕೊಳ್ಳಲು ತಿಳಿಸಿದ್ದರು.ಅದರಂತೆ, ನಿಗಮವು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸದಸ್ಯ ಮಂಡಳಿಯ ಸಭೆಯನ್ನು ಕರೆದು ಕೆಲವು ನಿರ್ಣಯಗಳನ್ನು ಅಂಗೀಕರಿಸುತ್ತಾರೆ.

ಸದರಿ ಸಭೆಯಲ್ಲಿ ಇಂತಹ ಘಟನೆಗಳು ಸಂಭವಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸುತ್ತಾರೆ. ಆಕಸ್ಮಿಕವಾಗಿ ಸಂಭವಿಸುವ ಇಂತಹ ಘಟನೆಗಳಿಂದ ತೊಂದರೆಗೆ ಸಿಲುಕುವ ವ್ಯಕ್ತಿಗಳಿಗೆ ಶೀಘ್ರದಲ್ಲಿ ಆರ್ಥಿಕ ನೆರವು ಲಭಿಸುವಂತಹ ಯೋಜನೆ ಆರಂಭಿಸುವುದು. ವಿದ್ಯುತ್ ಅಪಘಾತಕ್ಕೆ ಒಳಗಾಗುವವರೆಗೆ ವಿಮಾ ಸೌಲಭ್ಯ ಆರಂಭಿಸಲು ವಿಸೃತ ವರದಿಯನ್ನು ತಯಾರಿಸುವುದು. ಮತ್ತು ಮಂಡಳಿಯ ಸಭೆಯಲ್ಲಿ ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ, ಒಂದು ಬಾರಿಯ ರಾಜಿಗೆ ಒಪ್ಪಿಕೊಳ್ಳಲು ಮತ್ತು ಸಂತ್ರಸ್ತ-ಯುವಕನಿಗೆ ವಿದ್ಯುತ್ ಅಪಘಾತದ ಪರಿಣಾಮ ಆದ ಗಾಯಗಳಿಗೆ ಹಾಗೂ ತೊಂದರೆಗಾಗಿ ರೂ.40 ಲಕ್ಷ ಪಾವತಿಸುವ ಮೂಲಕ ಸಂಪೂರ್ಣ ಮತ್ತು ಅಂತಿಮ ಪರಿಹಾರವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಅನುಮೋದನೆ ನೀಡಿತು. ಅಲ್ಲದೆ ಈ ಬಾರಿಯ ಇತ್ಯರ್ಥ, ರಾಜಿಯನ್ನು ಯಾವುದೇ ರೀತಿಯ ಪ್ರಕರಣಗಳಿಗೆ ಪೂರ್ವ ನಿದರ್ಶನವೆಂದು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿಯು ನಿರ್ಧರಿಸಿತು. ಈ ಕ್ರಮವು ಒಂದು ಮಾದರಿಯಾಗಿದೆ.

ನಿಗಮದ ಮಂಡಳಿಯ ಒಪ್ಪಿಗೆ ಮತ್ತು ನಿರ್ಣಯವನ್ನು ವಿಭಾಗೀಯ ಪೀಠದ ಗಮನಕ್ಕೆ ತರಲಾಗುತ್ತದೆ. ಯುವಕನು ಮತ್ತು ಆತನ ವಕೀಲರು ಸದರಿ ನಿರ್ಣಯದಂತೆ ರೂ.40 ಲಕ್ಷದ ಪರಿಹಾರಕ್ಕೆ ಒಪ್ಪುವ ಮೂಲಕ ಪ್ರಕರಣವನ್ನು ಪರಸ್ಪರರ ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.ಹೀಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಕಾನೂನು ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು. ಇದಲ್ಲದೆ ಕಾನೂನು ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಕಾನೂನು ಸೇವಾ ಸಮಿತಿಗಳ ಮೂಲಕ ನಡೆಸಲಾಗುವ ಲೋಕ ಅದಾಲತ ಮೂಲಕ ಸಹ ರಾಜಿ-ಸಂಧಾನ ಮಾಡಿಕೊಳ್ಳಬಹುದು. ಇದಲ್ಲದೆ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಮೂಲಕ ನೇಮಕಗೊಂಡ ಮಧ್ಯಸ್ಥಿಕೆಗಾರರ ಮೂಲಕ ಅವರ ಮಾರ್ಗದರ್ಶನಲ್ಲಿಯೂ ಸಹ ಪ್ರಕರಣಗಳನ್ನು ಯಾವಾಗಲೂ ರಾಜಿ ಮಾಡಿಕೊಳ್ಳಬಹುದಾಗಿದೆ. ಮುಂದಿನ ರಾಷ್ಟ್ರೀಯ ಲೋಕ ಅದಾಲತನ್ನು ಮಾರ್ಚ 8, 2025 ರಂದು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಕ್ಷಿಗಾರರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...