ಚಿತ್ರದುರ್ಗ: ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ 40 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಅನುದಾನ ನೀಡದ ಕಾರಣ ಯಾವ ಪುರುಷಾರ್ಥಕ್ಕಾಗಿ ಶಾಸಕರಾಗಿ ಮುಂದುವರೆಯಬೇಕೆಂದು ಮುದ್ದೇಬಿಹಾಳದ ಕಾಂಗ್ರೆಸ್ ಶಾಸಕ ಅಪ್ಪಾಜಿಗೌಡ ಸೇರಿದಂತೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ಇಂತಹ 40 ಮಂದಿ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಏಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ್ದು, ಯಾವುದೇ ಒಂದು ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರಂಭವಾದ ಕಾಮಗಾರಿಗಳೇ ಮುಂದುವರೆಯುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಬಿಟ್ಟಿ ಭಾಗ್ಯ ಮತ್ತು ವಿವೇಚನೆ ಇಲ್ಲದೆ ತೆಗೆದುಕೊಂಡ ತೀರ್ಮಾನಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಟೀಕಿಸಿದ್ದಾರೆ.
ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಾಗಿದ್ದು, ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಕಾಂಗ್ರೆಸ್ ನ 40 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಕಾರಜೋಳ ಹೇಳಿದ್ದಾರೆ.