
ಹೌದು, ಸೆಲೆಬ್ರಿಟಿಗಳು ಸೇರಿದಂತೆ ಜನಸಾಮಾನ್ಯರ ವಿಚ್ಛೇದನಗಳು ಮದುವೆಯಾಗಿ ಒಂದೆರಡು ದಿನದಿಂದ ಹಿಡಿದು, 20 ವರ್ಷಗಳ ಸುದೀರ್ಘ ದಾಂಪತ್ಯ ನಡೆಸಿದ ಬಳಿಕವೂ ಆಗಿರೋ ಪ್ರಸಂಗಗಳು ಇವೆ. ಆದರೆ, ಅಮೆರಿಕಾದಲ್ಲಿ ದಂಪತಿಗಳು ಬರೋಬ್ಬರಿ 40 ವರ್ಷಗಳ ದಾಂಪತ್ಯ ಜೀವನದಿಂದ ವಿಮುಖರಾಗಿದ್ದು, ಬೇರೆ-ಬೇರೆಯಾಗಿದ್ದಾರೆ. ಇದನ್ನು ಸ್ವತಃ ಟ್ವಿಟ್ಟರ್ ನಲ್ಲಿ ವೃದ್ಧೆ ಹೇಳಿಕೊಂಡಿದ್ದಾರೆ.
ಅಮೆರಿಕಾದ ಕರೋಲ್ ಮ್ಯಾಕ್ ತನ್ನ 40 ವರ್ಷಗಳ ಸುದೀರ್ಘ ದಾಂಪತ್ಯದಿಂದ ಬೇರ್ಪಟ್ಟ ನಂತರ ನಿಜವಾದ ಪ್ರೀತಿಯನ್ನು ಹೇಗೆ ಕಂಡುಕೊಂಡರು ಎಂಬುದನ್ನು ವಿವರಿಸಿದ್ದಾರೆ. ನಿಶ್ಚಿತಾರ್ಥದ ಉಂಗುರವನ್ನು ಧರಿಸಿರುವ ಫೋಟೋವನ್ನು ಮ್ಯಾಕ್ ಟ್ವೀಟ್ ಮಾಡಿದ್ದು, ಇದು ಒಂದು ಮಿಲಿಯನ್ ಲೈಕ್ಸ್ ಮತ್ತು 72,000ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸಂಗ್ರಹಿಸಿದೆ.
ಜೀವನವು ತುಂಬಾ ವಿಚಿತ್ರವಾಗಿದೆ. ಸುಮಾರು ನಾಲ್ಕು ದಶಕಗಳ ಮದುವೆಯ ನಂತರ 70ನೇ ವಯಸ್ಸಿನಲ್ಲಿ ಮತ್ತೆ ಏಕಾಂಗಿಯಾಗಿದ್ದು, ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಅಲ್ಲದೇ 73ರ ವಯಸ್ಸಿನಲ್ಲೂ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಬಗ್ಗೆ ತಾನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ಮ್ಯಾಕ್, ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಳ್ಳುವ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಆಕೆ ತನ್ನ ಹೊಸ ಪ್ರೇಮಿಯ ಗುರುತನ್ನು ಮಾತ್ರ ಬಹಿರಂಗಪಡಿಸಲಿಲ್ಲ. ತನ್ನ ಗಂಡ ತನಗೆ ಮೋಸ ಮಾಡುತ್ತಿರುವುದನ್ನು ತಿಳಿದ ಕೂಡಲೇ ಮ್ಯಾಕ್ ತಮ್ಮ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ.