ಪಣಜಿ: ಗೋವಾದ ಹೋಟೆಲ್ ರೂಂ ನಲ್ಲಿ ತನ್ನ ಸ್ವಂತ ಮಗುವನ್ನೇ ಹತ್ಯೆಗೈದು, ಶವವನ್ನು ಸೂಟ್ ಕೇಸ್ ನಲ್ಲಿಟ್ಟು ಸಾಗಿಸುತ್ತಿದ್ದ ಹಂತಕಿ ತಾಯಿ ಸುಚನಾ ಸೇಠ್ ಳ ಇನ್ನಷ್ಟು ಕರಾಳ ಮುಖಗಳು ಬಯಲಾಗಿವೆ.
ಮೈಂಡ್ ಫುಲ್ ಕಂಪನಿ ಸ್ಥಾಪಕಿ, ಸಿಇಓ ಆಗಿದ್ದ ಸುಚನಾ ಸೇಠ್, ಕಳೆದ ಎರಡು ವರ್ಷಗಳ ಹಿಂದೆ ಪತಿಯಿಂದ ದೂರವಿದ್ದು ವಿಚ್ಛೇದನ ಪಡೆದುಕೊಂಡಿದ್ದಳು. ಪಶ್ಚಿಮ ಬಂಗಾಳ ಮೂಲದ ಸುಚನಾ, 2008-09ರಲ್ಲಿ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಜೊತೆ ವಿವಾಹವಾಗಿದ್ದಳು. ದಂಪತಿಗೆ ನಾಲ್ಕು ವರ್ಷದ ಮಗನಿದ್ದ. ಆದರೆ ಕೌಟುಂಬಕ ಕಲಹದಿಂದ ಪತಿ-ಪತ್ನಿ ದೂರಾಗಿ ವಿಚ್ಛೇದನ ಪಡೆದಿದ್ದರು. ಪ್ರತಿ ಭಾನುವಾರ ಮಗುನ್ನು ತಂದೆ ಭೇಟಿಯಾಗಲು ಕೋರ್ಟ್ ಅನುಮತಿ ನೀಡಿತ್ತು. ಆದರೆ ಸುಚನಾ ಪತಿ ಫಿಲಿಪೈನ್ಸ್ ನಲ್ಲಿ ಉದ್ಯೋಗದಲ್ಲಿದ್ದರು. ಹಾಗಾಗಿ ವಾರಕ್ಕೆ ಒಮ್ಮೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು.
ಜನವರಿ 6ರಂದು ಸುಚನಾ ತನ್ನ ಮಗನೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದಳು. ಉತ್ತರ ಗೋವಾದ ಕೋಲ್ ಬನಿಯಾನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಳು. ಜನವರಿ 7ರಂದೇ ಸುಚನಾ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಳು. ಮಗನ ಶವದ ಜೊತೆ ಒಂದು ದಿನ ಉಳಿದಿದ್ದ ಸುಚನಾ ಯಾರಿಗೂ ಗೊತ್ತಾಗದಂತೆ ಶವವನ್ನು ಸಾಗಿಸಲು ಸಾಕಷ್ಟು ಪ್ಲಾನ್ ಮಾಡಿದ್ದಳು. ಮಗು ಕೊಲೆಗೈದ ಬಳಿಕ ಸುಚನಾ ಕೈ ಕುಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು. ರೂಂ ಕ್ಲೀನ್ ಮಾಡಲು ಬಂದ ಸಿಬ್ಬಂದಿ ಅಲ್ಲಿದ್ದ ರಕ್ತದ ಕಲೆ ಬಗ್ಗೆ ವಿಚಾರಿಸಿದರೆ ಋತುಚಕ್ರದಿಂದ ಆಗಿರುವ ಕಲೆ ಎಂದು ನಂಬಿಸಿದ್ದಳು.
ತನ್ನ ಮಗು ಪತಿಯನ್ನು ನೋಡಬಾರದು ಎಂಬ ಕಾರಣಕ್ಕೆ ಪತಿ ಮೇಲಿನ ಧ್ವೇಷಕ್ಕೆ ಸುಚನಾ ಹೆತ್ತ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಜನವರಿ 7ರಂದು ಟ್ಯಾಕ್ಸಿ ಬುಕ್ ಮಾಡಲು ಹೋಟೆಲ್ ಸಿಬ್ಬಂದಿಗೆ ಹೇಳಿದ್ದಳು. ಬಳಿಕ ಬೇಡ ಎಂದು ಹೇಳಿದ್ದಳು. ಮಾರನೆ ದಿನ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿದ್ದಳು. ಟ್ಯಾಕ್ಸಿ ತುಂಬಾ ದುಬಾರಿ ಆಗುತ್ತದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದರೂ ಟ್ಯಾಕ್ಸಿಯೇ ಬೇಕು ಎಂದು ತಿಳಿಸಿದ್ದಳು. ಜ. 8ರಂದು ಮಧ್ಯರಾತ್ರಿ 1 ಗಂಟೆಗೆ ಹೋಟೆಲ್ ನಿಂದ ಚಕ್ ಔಟ್ ಆಗಿದ್ದಳು. ಇಂದು ಬೆಳಿಗ್ಗೆ ರೂಂ ಕ್ಲೀನ್ ಮಾಡಲು ತೆರಳಿದ್ದ ಹೋಟೆಲ್ ಸಿಬ್ಬಂದಿಗೆ ಸಾಕಷ್ಟು ಅನುಮಾನ ಬಂದಿತ್ತು. ತಕ್ಷಣ ಕಲ್ಲಂಗುಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸುಚನಾಳಿಗೆ ಕರೆ ಮಾಡಿ ಮಗುವಿನ ಬಗ್ಗೆ ವಿಚಾರಿಸಿದರೆ ತನ್ನ ಸ್ನೇಹಿತರ ಮನೆಗೆ ಕಳುಹಿಸಿದ್ದಾಗಿ ಹೇಳಿದ್ದಾಳೆ. ರಕ್ತದ ಕಲೆ ಬಗ್ಗೆ ಕೇಳಿದರೆ ಅದು ಋತುಚಕ್ರದಿಂದ ಆಗಿದ್ದು ಎಂದಿದ್ದಾಳೆ. ಸ್ನೇಹಿತರ ಮನೆ ವಿಳಾಸ ಕೇಳಿದಾಗ ಅದನ್ನು ತಪ್ಪಾಗಿ ಹೇಳಿದ್ದಳು. ತಕ್ಷಣ ಪೊಲಿಸರು ಟ್ಯಾಕ್ಸಿ ಚಾಲಕನ ಮೊಬೈಲ್ ಗೆ ಸಂಪರ್ಕಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಚಿತ್ರದುರ್ಗ ಎಸ್ಪಿಗೂ ಕರೆ ಮಾಡಿಗೋವಾ ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಮಗುವನ್ನು ಕೊಂದ ತಾಯಿ ಸುಚನಾ ಬಂಧನವಾಗಿದ್ದು 6 ದಿನಗಳ ಗೋವಾದ ಕಲ್ಲಂಗುಟ ಪೊಲಿಸರ ವಶಕ್ಕೆ ವಹಿಸಲಾಗಿದೆ.