ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಒಂದು ಗುಂಡಿನ ಚಕಮಕಿ ಶೋಪಿಯಾನ್‌ನಲ್ಲಿ ನಡೆದಿದ್ದರೆ, ಇನ್ನೊಂದು ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಶೋಪಿಯಾನ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಗೆ ಸೇರಿದವರು, ಆದರೆ ಪುಲ್ವಾಮಾದಲ್ಲಿ ಹತರಾದವರನ್ನು ಇನ್ನೂ ಗುರುತಿಸಲಾಗಿಲ್ಲ.
ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಶೋಪಿಯಾನ್‌ನ ಬ್ರರಿಪೋರಾ ನಿವಾಸಿ ಸಜಾದ್ ಅಹ್ಮದ್ ಚಾಕ್ ಮತ್ತು ಪುಲ್ವಾಮಾದ ಅಚಾನ್ ಲಿಟ್ಟರ್‌ನ ರಾಜಾ ಬಸಿತ್ ಯಾಕೂಬ್ ಎಂದು ಗುರುತಿಸಲಾಗಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಇಬ್ಬರೂ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಂಪುಗಳ ಭಾಗವಾಗಿದ್ದರು. ಭಯೋತ್ಪಾದಕ ಗುಂಪಿನಲ್ಲಿ ಯುವಕರನ್ನು ಪ್ರೇರೇಪಿಸುವ ಮತ್ತು ನೇಮಕಾತಿ ಮಾಡುವಲ್ಲಿ ಚಾಕ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಭಯೋತ್ಪಾದಕರಿಂದ ಎರಡು ಎಕೆ ಸಿರೀಸ್ ರೈಫಲ್‌ಗಳು, ನಾಲ್ಕು ಎಕೆ ಮ್ಯಾಗಜೀನ್‌ಗಳು ಮತ್ತು 32 ರೌಂಡ್ ಬುಲೆಟ್ ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ಹರ್ದುಮಿರ್‌ನಲ್ಲಿ ಎರಡನೇ ಎನ್‌ಕೌಂಟರ್ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಶುಕ್ರವಾರವಷ್ಟೇ ಭದ್ರತಾ ಪಡೆಗಳು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನ ಉಸಿರು ನಿಲ್ಲಿಸಿವೆ. ಆತ ಪೊಲೀಸ್, ನಾಗರಿಕರು ಮತ್ತು ಇತರರ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಎಲ್‌ಇಟಿ ಭಯೋತ್ಪಾದಕರ ಸಹಚರರಾದ ಇತರ ಇಬ್ಬರನ್ನು ಸಹ ಬಂಧಿಸಲಾಗಿದೆ.