ಬೆಂಗಳೂರು: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯಲಿದ್ದು, ಗೆಲುವು ಖಚಿತವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದ್ದು, ಕರ್ನಾಟಕ ಕಾಂಗ್ರೆಸ್ ಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆ ಗಿಂತ ಮೊದಲು ಬಂದಿರುವುದರಿಂದ ಇದನ್ನು ಸೆಮಿ ಫೈನಲ್ ಅಂತ ಮತ್ತೆ ಮತ್ತೆ ಹೇಳಿದ್ದರು. ಈಗ ಈ ಫಲಿತಾಂಶ ಲೋಕಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ ಎಂದರು.
ಮಧ್ಯಪ್ರದೇಶ ಮೂರನೇ ಎರಡರಷ್ಟು ಬಹುಮತ ಪಡೆದಿದ್ದೇವೆ. ಛತ್ತಿಸ್ ಘಡ, ರಾಜಸ್ತಾನದಲ್ಲೂ ಸ್ಪಷ್ಟ ಬಹುಮತ ಪಡೆದಿದ್ದೇವೆ. ತೆಲಂಗಾಣದಲ್ಲಿ ನಮ್ಮ ಸಂಖ್ಯೆ 1 ರಿಂದ 11 ಕ್ಕೆ ಏರಿದ್ದೇವೆ. ಈ ಫಲಿತಾಂಶಕ್ಕೆ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾನ್ ಸೇರಿದಂತೆ ಎಲ್ಲ ನಾಯಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.