ಬೆಂಗಳೂರು: ಸತ್ಯಾಸತ್ಯತೆ ಪರಿಶೀಲಿಸದೇ ಮಾದಕ ವಸ್ತುಗಳ ಮಾರಟ ಪ್ರಕರಣ ಸಂಬಂಧ ಮೂವರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಪ್ರಕರಣ ಸಂಬಂಧ, ಪಿಎಸ್ ಐ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬನಶಂಕರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಗುಗ್ರಿ, ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಸ್.ಕೆ.ರಾಜು, ಕಾನ್ಸ್ ಟೇಬಲ್ ಗಳಾದ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ ಅವರನ್ನು ಕರ್ತವ್ಯಲೋಪ ಆರೋದಡಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬಾತ್ಮೀದಾರನ ಮಾತು ಕೇಳಿ ಸತ್ಯಾಸತ್ಯತೆ ಪರಿಶೀಲನೆ ನಡೆಸದೇ ಮೂವರು ಅಮಾಯಕರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ನಾಲ್ವರು ಸಸ್ಪೆಂಡ್ ಆಗಿದ್ದಾರೆ. ಇನ್ನು ಪೊಲೀಸ್ ಬಾತ್ಮೀದಾರ ರಾಜನ್ ಹಾಗೂ ಈತನ ಸ್ನೇಹಿತೆ ಚೈತ್ರಾ ಎಂಬಾಕೆಯನ್ನು ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.