ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಸೋಮವಾರ ರಾತ್ರಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಮನೆ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.
ಪಟಾಕಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದ ಮನೆ ಸ್ಫೋಟದ ರಭಸಕ್ಕೆ ನಜ್ಜುಗುಜ್ಜಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸಮೀಪದ ಮನೆಯ ಛಾವಣಿಯೂ ಕುಸಿದಿದೆ.
ರಕ್ಷಣಾ ಸಿಬ್ಬಂದಿ ಕಟ್ಟಡದಿಂದ 10 ಜನರನ್ನು ಹೊರತೆಗೆದಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಮೇಶ್ ರಂಜನ್, ‘ಜಿಲ್ಲಾ ಆಸ್ಪತ್ರೆ ಮತ್ತು ಉಪ ಜಿಲ್ಲಾ ಆಸ್ಪತ್ರೆ ಎರಡರಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ವೈದ್ಯರ ತಂಡ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ಮತ್ತು ವಿಪತ್ತು ತಂಡ ಎಲ್ಲವೂ ಸ್ಥಳದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಾವುಗಳನ್ನು ದೃಢಪಡಿಸಿದ ಆಗ್ರಾ ಐಜಿ ದೀಪಕ್ ಕುಮಾರ್, ಮನೆಯೊಂದರಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು ಮತ್ತು ಅಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಮನೆಯ ಛಾವಣಿ ಕುಸಿದಿದೆ. ಪೊಲೀಸರು ಅವಶೇಷಗಳಿಂದ 10 ಜನರನ್ನು ಹೊರತೆಗೆದರು. 6 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 4 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ರಾತ್ರಿ 10.30 ರ ಸುಮಾರಿಗೆ ಪಟಾಕಿ ಗೋಡೌನ್‌ನಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ, ಇದರಿಂದಾಗಿ ಕಟ್ಟಡದ ಗೋಡೆಗಳು ಕುಸಿದು ಅದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಏಳು ಜನರು ಅವಶೇಷಗಳ ಅಡಿಯಲ್ಲಿ ಹೂತುಹೋದರು. ಮೃತರನ್ನು ಮೀರಾ ದೇವಿ(45), ಅಮನ್(20), ಗೌತಮ್ ಕುಶ್ವಾಹ(18) ಮತ್ತು ಕುಮಾರಿ ಇಚ್ಚಾ(3) ಎಂದು ಗುರುತಿಸಲಾಗಿದೆ.