ಚೆನ್ನೈ: ತಮಿಳುನಾಡಿನಾದ್ಯಂತ ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದು, ಚಂಡಮಾರುತದಿಂದಾದ ಅನಾಹುತಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ.
ಸೈಕ್ಲೋನ್ ನಿಂದಾಗಿ ಚೆನ್ನೈ, ಮಾದಿಪಾಕಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ 85 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ತಮಿಳುನಾಡಿನ ಹಲವೆಡೆಗಳಲ್ಲಿ ಭೂ ಕುಸಿತವುಂಟಾಗಿದ್ದು, 400ಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿವೆ. ಹಲವೆಡೆ ವಾಹನಗಳ ಮೇಲೆ ಮರಗಳು ಬಿದ್ದು, ನೂರಾರು ವಾಹನಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದಿದ್ದು, ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆ ಅವಾಂತರದಿಂದ ಚೆನ್ನೈನ ಬಹುತೇಕ ಕಡೆಗಳಲ್ಲಿ ಜಲಾವೃತಗೊಂಡಿದ್ದು, ಅನಾಹುತಗಳು ಸಂಭವಿಸಿವೆ. ಟಿ.ನಗರದಲ್ಲಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ನಿಂತಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ.
ಚೆನ್ನೈನಲ್ಲಿ ಬಿರುಗಾಳಿ, ಮಳೆ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮಾದಿಪಾಕಂ, ರಾಮನಗರಂನಲ್ಲಿ ತಲಾ ಇಬ್ಬರು ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. 10 ಜಿಲ್ಲೆಗಳಲ್ಲಿ ಎನ್ ಡಿ ಆರ್ ಎಫ್ ತಂಡ ನಿಯೋಜನೆಗೊಂದಿದ್ದು, 205 ರಿಲೀಫ್ ಕ್ಯಾಂಪ್ ಗಳಲ್ಲಿ 8 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಾಂಡೌಸ್ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.