ಗುಜರಾತ್ನ ದಾಹೋದ್ ಜಿಲ್ಲೆಯ ಬುಡಕಟ್ಟು ಪ್ರದೇಶವೊಂದರ ಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಆಚರಣೆಯೊಂದರಲ್ಲಿ ಬಡಿಸಲಾದ ಊಟದಲ್ಲಿ ನಂಜಿನಂಶವಿದ್ದ ಕಾರಣ ನಾಲ್ವರು ಮೃತಪಟ್ಟು, ಡಜ಼ನ್ನಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ದೇವಘಡ ಬಾರಿಯಾ ಪಟ್ಟಣದ ಆಸ್ಪತ್ರೆ ಸೇರಿದವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭುಲ್ವಾನ್ ಎಂಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೀಡಲಾದ ಆಹಾರದಲ್ಲಿ ಕಲಬೆರಕೆ ಅಥವಾ ಸ್ಥಳೀಯವಾಗಿ ತಯಾರಿಸಿದ ಹೆಂಡದ ಸೇವನೆಯಿಂದ ಹೀಗಾಗಿದೆ ಎಂದು ಶಂಕಿಸಲಾಗಿದೆ. ನಾಲ್ವರ ಸಾವಿಗೆ ಸ್ಪಷ್ಟವಾದ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಗ್ರಾಮಸ್ಥರು ಸೇವಿಸಿದ್ದ ಆಹಾರದ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಸ್ಥಳೀಯ ದೇವತೆಯ ಜಾತ್ರೆಯೊಂದರಲ್ಲಿ ಈ ಘಟನೆ ಜರುಗಿದೆ. ದೇವಿಯ ಪೂಜೆ ಬಳಿಕ ಹಬ್ಬದೂಟ ಸವಿದ ಮಂದಿಗೆ ಹೀಗೆ ಸಮಸ್ಯೆ ಆಗಿದೆ.
ಮೃತಪಟ್ಟ ನಾಲ್ವರ ದೇಹಗಳ ಮರಣೋತ್ತರ ಪರೀಕ್ಷೆಗಳ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.