
ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ 1.80 ಲಕ್ಷ ಮನೆಯ ಫಲಾನುಭವಿಗಳು ಪಾವತಿಸಬೇಕಾಗಿದ್ದ 4.5 ಲಕ್ಷ ರೂಪಾಯಿಗಳನ್ನು ಒಂದು ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಉಳಿದ 3.5 ಲಕ್ಷ ರೂ.ಗಳನ್ನು ಸರ್ಕಾರವೇ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿಗೆ ಮನೆ ಸಿಗಲಿದೆ.
ಪಿಎಂ ಆವಾಸ್ ಮನೆಗೆ 4.5 ಲಕ್ಷ ರೂ. ಬದಲು ಒಂದು ಲಕ್ಷ ರೂಪಾಯಿ ಪಾವತಿಸಿದರೆ ಸಾಕು. ಮೊದಲ ಹಂತದಲ್ಲಿ 48,796 ಮನೆಗಳ ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. 5 ವರ್ಷದಲ್ಲಿ ಅಂತಂತವಾಗಿ ಉಳಿದ 1.3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳಿಗೆ ನಿಗದಿಪಡಿಸಿದ್ದ 4.5 ಲಕ್ಷ ರೂ. ಹಣ ಪಾವತಿಸಲು ಬಹುತೇಕರಿಗೆ ಸಾಧ್ಯವಾಗದೆ ಮನೆಗಳನ್ನು ಪೂರ್ಣಗೊಳಿಸಲಾಗಿಲ್ಲ. ಸರ್ವರಿಗೂ ಸೂರು ಕಲ್ಪಿಸುವ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.