ದೇಶದಲ್ಲಿ ಕೊರೊನಾ ಎರಡನೆ ಅಲೆಯು ಇಳಿಮುಖವಾಗುತ್ತಿರೋದರ ನಡುವೆಯೇ ಆರೋಗ್ಯ ತಜ್ಞರು ಮೂರನೆ ಅಲೆಯ ಮುನ್ಸೂಚನೆಯನ್ನ ನೀಡಿದ್ದಾರೆ. ಈ ವರ್ಷದ ಅಕ್ಟೋಬರ್ ತಿಂಗಳ ವೇಳೆಗೆ ಮೂರನೆ ಅಲೆಯು ದೇಶದಲ್ಲಿ ಶುರುವಾಗಲಿದೆ. ಆದರೆ ಎರಡನೆ ಅಲೆಗೆ ಹೋಲಿಸಿದ್ರೆ ಮೂರನೇ ಅಲೆಯನ್ನ ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ಆರೋಗ್ಯ ತಜ್ಞರಿಂದ ಕಲೆ ಹಾಕಿರುವ ಮಾಹಿತಿಯ ಪ್ರಕಾರ, ಈ ಹೊಸ ಅಲೆಯನ್ನ ಗಂಭೀರತೆಯನ್ನ ಕಡಿಮೆ ಮಾಡುವಲ್ಲಿ ಕೊರೊನಾ ಲಸಿಕೆಯು ಮಹತ್ವದ ಪಾತ್ರ ವಹಿಸಲಿದೆ. ಜೂನ್ ಮೂರರಿಂದ 17ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 40 ಮಂದಿ ಆರೋಗ್ಯ ತಜ್ಞರು, ವೈದ್ಯರು, ವಿಜ್ಞಾನಿಗಳು, ವೈರಾಣು ತಜ್ಞರು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.
ಈ ಸಮೀಕ್ಷೆಯಲ್ಲಿದ್ದ 85 ಪ್ರತಿಶತದಷ್ಟು ಮಂದಿ ಕೊರೊನಾ ಮೂರನೆ ಅಲೆಯು ಅಕ್ಟೋಬರ್ನಲ್ಲಿ ದೇಶಕ್ಕೆ ಬಂದಪ್ಪಳಿಸಲಿದೆ ಎಂದು ಹೇಳಿದ್ದಾರೆ. ಕೆಲವರು ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೇ ಕೊರೊನಾ ಮೂರನೇ ಅಲೆಯ ಆರ್ಭಟ ಇರಲಿದೆ ಎಂದು ಹೇಳಿದ್ದಾರೆ. ಉಳಿದ ಮೂರು ಪ್ರತಿಶತ ಮಂದಿ ನವೆಂಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಮೂರನೇ ಅಲೆ ಅಬ್ಬರಿಸಲಿದೆ ಎಂದು ಹೇಳಿದ್ದಾರೆ.
70 ಪ್ರತಿಶತ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಈಗಿರುವ ಅಲೆಗೆ ಹೋಲಿಕೆ ಮಾಡಿದ್ರೆ ಮೂರನೆ ಅಲೆಯನ್ನ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಆದರೆ ಕೊರೊನಾ ಮೊದಲ ಅಲೆಗಿಂತ ಭಯಾನಕವಾಗಿ ಇರಬಹುದು ಎಂದು ಅಂದಾಜಿಸಿದ್ದಾರೆ.
ಕೊರೊನಾ ಮೂರನೆ ಅಲೆಯನ್ನ ನಿಯಂತ್ರಿಸಬಹುದಾಗಿದೆ. ಕೊರೊನಾ ಲಸಿಕಾ ಅಭಿಯಾನವನ್ನ ನಡೆಸುತ್ತಿರೋದು ಸಹ ಕೊರೊನಾ ಮೂರನೆ ಅಲೆಯ ವಿರುದ್ಧದ ಹೋರಾಟಕ್ಕೆ ಮುನ್ನಡೆ ನೀಡಲಿದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಒಂದು ವೇಳೆ ಕೊರೊನಾ ಮೂರನೆ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹೆಚ್ಚಾಗಿ ತಗಲುತ್ತೆ ಎಂಬ ಮಾತೇ ನಿಜವಾದಲ್ಲಿ ಈ ಪರಿಸ್ಥಿತಿಯನ್ನ ಎದುರಿಸಲು ದೇಶ ಸಂಪೂರ್ಣವಾಗಿ ತಯಾರಾಗಿಲ್ಲ. ಕೊನೆ ಘಳಿಗೆಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಹೇಳಿದ್ದಾರೆ. ಈ ರೀತಿ ಆದಲ್ಲಿ ಮಾತ್ರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ 14 ಮಂದಿ ತಜ್ಞರು ಮಕ್ಕಳಿಗೆ ಕೊರೊನಾ ಮೂರನೇ ಅಲೆಯಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.