ತನ್ನ ಗೆಳೆಯನನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕೊಲೆಗಾರರನ್ನು ಬಾಡಿಗೆಗೆ ಪಡೆದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ನೋಯಿಡಾ ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಕ್ಸ್ಪ್ರೆಸ್ವೇನ ಜ಼ೀರೋ ಪಾಯಿಂಟ್ನಲ್ಲಿ ಈ ಮಹಿಳೆಯನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಜಾನ್ಪುರದವನಾದ ತನ್ನ ಸ್ನೇಹಿತನನ್ನು ಕೊಲ್ಲಲು ಬಾಡಿಗೆಗೆ ಪಡೆದ ಇಬ್ಬರು ಕೊಲೆಗಾರರಿಗೆ ಕಾಯುತ್ತಿದ್ದ ವೇಳೆ ಈಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಹಿಳೆಯ ಕೈಯಲ್ಲಿದ್ದ ದೇಶಿ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಾಜ಼ಿಯಾಬಾದ್ನ ರಾಜ್ನಗರ ಪ್ರದೇಶದ ನಿವಾಸಿಯಾದ, 39 ವರ್ಷ ವಯಸ್ಸಿನ ಆಪಾದಿತೆಯ ವಿರುದ್ಧ ಶಸ್ತ್ರಗಳ ಕಾಯಿದೆಯ ಸೆಕ್ಷನ್ 3 ಹಾಗೂ 25ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಇಬ್ಬರೂ ಶೂಟರ್ಗಳ ವಿರುದ್ಧ ಐಪಿಸಿ ಸೆಕ್ಷನ್ 120-ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಈ ಮಹಿಳೆಯ ಮಕ್ಕಳಿಬ್ಬರಿಗೂ ಪಾಠ ಹೇಳಿಕೊಡುತ್ತಿದ್ದ ವ್ಯಕ್ತಿ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಎರಡು ತಿಂಗಳ ಹಿಂದೆ ತನ್ನ ಊರು ಜಾನ್ಪುರಕ್ಕೆ ತೆರಳಿದ ಈ ವ್ಯಕ್ತಿ ಅಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಮದುವೆ ಮಾಡಿಕೊಂಡ ಕಾರಣ ಆಪಾದಿತೆಗೆ ಸಿಟ್ಟು ಬಂದಿದೆ.
ಆತನ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ಕೌಶಿಂದರ್ ಹಾಗೂ ಭೋಲಾ ಎಂಬ ಶೂಟರ್ಗಳನ್ನು ನಾಲ್ಕು ಲಕ್ಷ ರೂಪಾಯಿ ತೆತ್ತು ಬಾಡಿಗೆಗೆ ಪಡೆದಿದ್ದಾಳೆ. ಇದಕ್ಕಾಗಿ ಆಕೆ ಮುಂಗಡವಾಗಿ 30,000 ರೂ.ಗಳ ಪಾವತಿಯನ್ನೂ ಮಾಡಿದ್ದಾಳೆ.
ಸಂತ್ರಸ್ತ ವ್ಯಕ್ತಿಯನ್ನು ಕೊಲ್ಲಲೆಂದು ಖುದ್ದು ಆಪಾದಿತೆಯೇ 5,000 ರೂ.ಗಳನ್ನು ಕೊಟ್ಟು ಘಾಜ಼ಿಯಾಬಾದ್ನಿಂದ ದೇಶೀ ಪಿಸ್ತೂಲ್ನ ವ್ಯವಸ್ಥೆಯನ್ನೂ ಮಾಡಿದ್ದಾಳೆ.