ಡೆಹ್ರಾಡೂನ್: ಹಿಂದೂಗಳ ಪವಿತ್ರ ಯಾತ್ರಾ ತಾಣ ಚಾರ್ ಧಾಮ್ ಯಾತ್ರೆಗೆ ತೆರಳಿದ್ದವರಲ್ಲಿ ಈವರೆಗೆ 39 ಜನರು ಸಾವನ್ನಪ್ಪಿದ್ದು, ಬಹುತೇಕರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಉತ್ತರಾಖಂಡ ಸರ್ಕಾರ ತಿಳಿಸಿದೆ.
ಮೇ 3ರಿಂದ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ತಾಣಗಳಿಗೆ-ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಈ ಬಾರಿ ಕೋವಿಡ್ ನಿಯಮ ಸಡಿಲಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಗೆ ತೆರಳಿದ್ದಾರೆ.
ಚಾರ್ ಧಾಮ್ ಯಾತ್ರಿಕರಲ್ಲಿ ಈವರೆಗೆ 39 ಜನ ಮೃತಪಟ್ಟಿದ್ದು, ರಕ್ತದೊತ್ತಡ, ಹೃದಯದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ತಿಳಿಸಿದೆ.
ಇಂತಿಷ್ಟೆ ಜನರು ಚಾರ್ ಧಾಮ್ ಯಾತ್ರೆಗೆ ತೆರಳಬೇಕು ಎಂದು ಸರ್ಕಾರ ನಿಯಮ ರೂಪಿಸಿದ್ದರೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಕೋವಿಡ್ ನೆಗೆಟಿವ್ ವರದಿ ಕೂಡ ಪಡೆದುಕೊಂಡಿರಲಿಲ್ಲ. ಮಾತ್ರವಲ್ಲ ಯಾತ್ರಿಕರಿಂದ ಅನಾಹುತ ಸಂಭವಿಸಿದರೆ ತಾವೇ ಜವಾಬ್ದಾರರು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಚಾರ್ ಧಾಮ್ ತಾಣಗಳು ಸಮುದ್ರಮಟ್ಟದಿಂದ 10-12 ಸಾವಿರ ಎತ್ತರವಿರುವ ಹಿನ್ನೆಲೆಯಲ್ಲಿ ಅನಾರೋಗ್ಯವಿರುವವರು ಯಾತ್ರೆ ಕೈಗೊಳ್ಳದಂತೆ ಇದೀಗ ಉತ್ತರಾಖಂಡ ಆರೋಗ್ಯ ಇಲಾಖೆ ಸೂಚನೆ ನೀಡಿದೆ.