ನವದೆಹಲಿ: ಇತ್ತೀಚೆಗೆ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವ ಕುರಿತಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಬಿಡುಗಡೆ ಮಾಡಿದ್ದು, ಆತಂಕ ವ್ಯಕ್ತಪಡಿಸಿದೆ. ಈ ವರದಿಯ ಪ್ರಕಾರ ಶೇ.38 ರಷ್ಟು ಯುವಕರು ಮತ್ತು ಶೇ.9 ರಷ್ಟು ಯುವತಿಯರು ತಂಬಾಕು ಉತ್ಪನ್ನಗಳ ಬಳಕೆ ನಿರತರಾಗಿದ್ದಾರೆ ಎಂದು ಹೇಳಿದೆ.
ಆತಂಕದ ವಿಷಯವೆಂದರೆ ಇವರೆಲ್ಲಾ 15 ವರ್ಷ ಮೇಲ್ಪಟ್ಟವರು ಎಂಬುದು. ಇನ್ನು 15 ವರ್ಷ ಮೇಲ್ಪಟ್ಟವರಲ್ಲಿ ಹುಡುಗರಲ್ಲಿ ಶೇ.19 ರಷ್ಟು ಮಂದಿ ಮದ್ಯಪಾನ ಮಾಡಿದರೆ ಶೇ.1 ರಷ್ಟು ಹುಡುಗಿಯರು ಇದರ ದಾಸರಾಗಿದ್ದಾರೆ. NFHS-5 ಸಮೀಕ್ಷೆಯನ್ನು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು, 707 ಜಿಲ್ಲೆಗಳಲ್ಲಿ ಅಂದಾಜು 6.37 ಲಕ್ಷ ಮಂದಿಗೆ ನಡೆಸಲಾಗಿದೆ.
ಮುಖ್ಯವಾಗಿ ಈ ಸಮೀಕ್ಷೆಯನ್ನು ಜಾತಿವಾರು, ಶಿಕ್ಷಣವಾರು, ಪ್ರದೇಶವಾರು, ವ್ಯಕ್ತಿವಾರು ನಡೆಸಲಾಗಿದೆ. ಪ್ರದೇಶವಾರು ನೋಡುವುದಾದರೆ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಸೇವನೆ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ಶೇ. 29 ಪುರುಷರು ಮತ್ತು ಶೇ 6 ಮಹಿಳೆಯರು ತಂಬಾಕು ಸೇವಿಸುತ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶೇ.43ರಷ್ಟು ಪುರುಷರು ಮತ್ತು ಶೇ.11ರಷ್ಟು ಮಹಿಳೆಯರು ಈ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ.
ಶಿಕ್ಷಣವಾರು ಗುರುತಿಸುವುದಾದರೆ, ಶಾಲಾ ಶಿಕ್ಷಣವಿಲ್ಲದ ಅಥವಾ 5 ವರ್ಷಕ್ಕಿಂತ ಕಡಿಮೆ ಶಾಲಾ ಶಿಕ್ಷಣವನ್ನು ಹೊಂದಿರುವ ಪುರುಷರು, ಮಹಿಳೆಯರು ತಂಬಾಕಿನ ಅಡಿಯಾಳಾಗುತ್ತಿದ್ದಾರೆ ಎಂಬುದು ಸಹ ಕೊಂಚ ಆತಂಕವೇ. ಪುರುಷರು ಶೇ.58 ರಷ್ಟು ಮತ್ತು ಶೇ.15 ರಷ್ಟು ಮಹಿಳೆಯರು ತಂಬಾಕನ್ನು ಬಳಸುತ್ತಾರೆ ಎಂದು ವರದಿ ಹೇಳಿದೆ.