ಕಳೆದ ಎರಡು ವರ್ಷಗಳಿಂದ, ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಜನರ ಜೀವನವನ್ನು ಅಡ್ಡಿಪಡಿಸಿದೆ. ಲಾಕ್ ಡೌನ್ ಮುಂತಾದ ಕಾರಣಗಳಿಂದಾಗಿ ಅನೇಕರು ತಮ್ಮ ಮದುವೆಯ ಯೋಜನೆಗಳನ್ನು ಮುಂದೂಡಿದ್ದರು. ಇನ್ನೂ ಹಲವರು ತಮ್ಮ ಮದುವೆಯನ್ನು ರದ್ದುಗೊಳಿಸಬೇಕಾಯಿತು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಆಚರಿಸುವ ಅವರ ಕನಸು ನನಸಾಗಲಿಲ್ಲ.
ಇದೀಗ, ಸಾಂಕ್ರಾಮಿಕ ಪರಿಸ್ಥಿತಿಯು ಕ್ರಮೇಣ ಸುಧಾರಿಸುತ್ತಿರುವುದರಿಂದ, ನೂತನ ಜೋಡಿಗಳು ಅದ್ಧೂರಿ ಆಚರಣೆಗೆ ಸಿದ್ಧರಾಗಿದ್ದಾರೆ. ಅಂದಹಾಗೆ, ಅಮೆರಿಕಾವು ಈ ವರ್ಷ 26 ಲಕ್ಷ ವಿವಾಹಗಳಿಗೆ ಸಾಕ್ಷಿಯಾಗಲಿದೆ. ಒಂದೇ ವರ್ಷದಲ್ಲಿ ಗರಿಷ್ಠ ಸಂಖ್ಯೆಯ ವಿವಾಹವಾಗುತ್ತಿರುವುದು, 38 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. 1984 ರಲ್ಲಿ, ಕೊನೆಯ ಬಾರಿಗೆ ದೇಶದಲ್ಲಿ 26 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆದಿದ್ದವು.
ಸಾಮಾನ್ಯವಾಗಿ, ಅಮೆರಿಕಾದಲ್ಲಿ ವಾರಾಂತ್ಯದಲ್ಲಿ ಮದುವೆ ಸಮಾರಂಭ ಏರ್ಪಾಡಾಗುತ್ತದೆ. ಆದರೆ, ಈ ಬಾರಿ ಹೆಚ್ಚಿನ ಮದುವೆ ಸಮಾರಂಭಗಳನ್ನು ವಾರದ ದಿನಗಳಲ್ಲಿ ಆಯೋಜಿಸಲಾಗುತ್ತಿದೆ. ಆನ್‌ಲೈನ್ ವೆಡ್ಡಿಂಗ್ ಪ್ಲಾನರ್ ಕಂಪನಿಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, 3300 ಮದುವೆಗಳ ದಿನಾಂಕಗಳಲ್ಲಿ, ವಾರದ ದಿನಗಳಲ್ಲಿ ವಿವಾಹವಾಗುತ್ತಿರುವುದು ಶೇ.11 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಕೆಲಸದ ದಿನಗಳಲ್ಲಿ ಮದುವೆಗಳನ್ನು ಆಯೋಜಿಸಲು ಜನರು ಆರಂಭದಲ್ಲಿ ಸ್ವಲ್ಪ ಹಿಂಜರಿಯುತ್ತಿದ್ದರು.
ಕಳೆದ ವರ್ಷ ಭಾರತದಲ್ಲಿ ಅಂದಾಜು 25 ಲಕ್ಷ ವಿವಾಹಗಳು ನವೆಂಬರ್ 14 ಮತ್ತು ಡಿಸೆಂಬರ್ 13 ರ ನಡುವೆ ನಡೆದಿವೆ. ಸಿಎಐಟಿ ಪ್ರಕಾರ, ಈ ವಿವಾಹಗಳು 3 ಲಕ್ಷ ಕೋಟಿ ಮೌಲ್ಯದ ವ್ಯವಹಾರವನ್ನು ಸೃಷ್ಟಿಸಿವೆ. ಈ 25 ಲಕ್ಷ ವಿವಾಹಗಳಲ್ಲಿ ದೆಹಲಿಯಲ್ಲಿ ಅಂದಾಜು 1.5 ಲಕ್ಷ ವಿವಾಹಗಳು ನಡೆದಿದ್ದು, 50 ಕೋಟಿ ರೂ. ವೆಚ್ಚವಾಗಿದೆ ಎಂಬುದು ತಿಳಿದು ಬಂದಿದೆ.