ಇಂದೋರ್: ಸಿಗ್ನಲ್‍ನಲ್ಲಿ ಕೆಂಪು ದೀಪ ಉರಿಯುತ್ತಿದ್ದರೂ ಕ್ಯಾರೆ ಎನ್ನದ ಕೆಲವು ವಾಹನ ಸವಾರರು ಸಿಗ್ನಲ್ ಜಂಪ್ ಮಾಡುತ್ತಾರೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಾಲಕನೊಬ್ಬ 38 ಬಾರಿ ಸಿಗ್ನಲ್ ಜಂಪ್ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಟ್ರಾಫಿಕ್ ಪೊಲೀಸರು ಸಾರ್ವಜನಿಕ ಸಾರಿಗೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಸಂಚಾರ ನಿರ್ವಹಣಾ ಪೊಲೀಸರ ಕ್ವಿಕ್ ರೆಸ್ಪಾನ್ಸ್ ತಂಡವು ವಾಹನಗಳನ್ನು ಪರಿಶೀಲಿಸುತ್ತಿದ್ದವು. ಈ ನಡುವೆ ಟಾಟಾ ಮ್ಯಾಜಿಕ್ ವಾಹನವು ಎಡ ತಿರುವಿನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಇದನ್ನು ಕಂಡ ಟ್ರಾಫಿಕ್ ಪೊಲೀಸ್ ವ್ಯಾನ್ ಅನ್ನು ನಿಲ್ಲಿಸಲು ಯತ್ನಿಸಿದರಾದರೂ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಇನ್ಸ್ ಪೆಕ್ಟರ್ ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ, ಕೆಂಪು ದೀಪ ಉಲ್ಲಂಘನೆಯಡಿ (ಆರ್‌ಎಲ್‌ವಿಡಿ) 38 ಚಲನ್‌ಗಳು ಬಾಕಿ ಉಳಿದಿರುವುದು ಗೊತ್ತಾಗಿದೆ. ಅಲ್ಲದೆ, ವಾಹನದ ಹಿಂಬದಿಯಲ್ಲಿ ಲೈಟ್ ಇಲ್ಲದಿರುವುದು ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದು, ಚಾಲಕನ ವಿರುದ್ಧ ಮುಂದಿನ ಕ್ರಮಕೈಗೊಳ್ಳುತ್ತಿದ್ದಾರೆ.