ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಒಂದು ಮಹತ್ತರ ಘಟ್ಟ. ಅದಕ್ಕಾಗಿ ನೂರಾರು ಕನಸುಗಳನ್ನೇ ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ ವ್ಯಕ್ತಿಯೊಬ್ಬ ಮದುವೆ ಕುರಿತಾಗಿ ನೂರಾರು ಆಸೆಗಳನ್ನೇ ಇಟ್ಟುಕೊಂಡಿದ್ದ.
ಆದರೆ ವಿಪರ್ಯಾಸ ಅಂದರೆ ವಯಸ್ಸು 37 ಆಗಿದ್ದರೂ ಆತನಿಗೆ ಕಂಕಣ ಭಾಗ್ಯವೇ ಒಲಿದು ಬಂದಿರಲಿಲ್ಲ. ಅದರಿಂದ ನೊಂದ ಆ ವ್ಯಕ್ತಿ ನೇರವಾಗಿ ಹೋಗಿದ್ದು, ಮಾಟ ಮಂತ್ರ ಮಾಡುವ ಮಾಂತ್ರಿಕನ ಬಳಿ. ಈಗ ಅದೇ ಮಾಂತ್ರಿಕನ ಮಾತು ಕೇಳಿ 8 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಬಂಕುರಾ ಎಂಬ ಜಿಲ್ಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಮದುವೆ ಆಗುತ್ತಿಲ್ಲ ಎಂದು ನೊಂದು ಮಾಂತ್ರಿಕನ ಬಳಿ ಹೋಗಿದ್ದಾನೆ. ಮದುವೆಗೆ ಅನೇಕ ಅಡೆತಡೆಗಳಿವೆ ಎಂದು ಮಾಂತ್ರಿಕ ಹೇಳಿದ್ದಾನೆ. ಕೊನೆಗೆ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗಬೇಕು ಅಂದರೆ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗುವಂತೆ ಹೇಳಿದ್ದಾನೆ. ಅದನ್ನು ನಂಬಿ ಅಮಾಯಕಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಮಾಡಿದಾಗ ಬಾಲಕಿಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತೊಯ್ದ ಬಟ್ಟೆಯಲ್ಲಿ ತಂದರೆ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತೆ ಎಂದು ಮಾಂತ್ರಿಕನ ಹೇಳಿದ್ದಾನೆ. ಈ ವ್ಯಕ್ತಿ ಆತ ಹೇಳಿದಂತೆ ಎಲ್ಲ ಮಾತನ್ನ ಚಾಚೂ ತಪ್ಪದೇ ಪಾಲಿಸಿದ್ಧಾನೆ.
ವೃತ್ತಿಯಲ್ಲಿ ಶಿಕ್ಷಕನಾಗಿ ಜ್ಞಾನದ ಬೆಳಕನ್ನು ಪಸರಿಸಬೇಕಾಗಿದ್ದ ಶಿಕ್ಷಕ ಈ ರೀತಿಯ ಮೂಢನಂಬಿಕೆಯನ್ನ ನಂಬಿ ಹೇಸಿಗೆ ತರಿಸುವ ಕೆಲಸ ಮಾಡಿರುವುದು ನಿಜಕ್ಕೂ ವಿಪರ್ಯಾಸ. ಪ್ರಕರಣ ಬೆಳಕಿಗೆ ಬಂದಾಕ್ಷಣ ಶಿಕ್ಷಕನನ್ನ ಬಂಧಿಸಲಾಗಿದೆ. ಜೊತೆಗೆ ಈ ರೀತಿಯ ನೀಚ ಕೆಲಸಕ್ಕೆ ಕುಮ್ಮಕ್ಕು ನೀಡಿದ್ದ ಮಾಂತ್ರಿಕನನ್ನ ಕೂಡಾ ಬಂಧಿಸಲಾಗಿದೆ.