ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದರ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಯೋಗಿ ಆದಿತ್ಯನಾಥ್ ಯುಪಿಯಲ್ಲಿ ಐದು ವರ್ಷಗಳ ಅಧಿಕಾರವನ್ನು ಪೂರೈಸಿ ಬಳಿಕ ಮತ್ತೆ ಸಿಎಂ ಗದ್ದುಗೆ ಏರುತ್ತಿರುವ ಮೊದಲ ಮುಖ್ಯಮಂತ್ರಿ ಎನಿಸಿದ್ದಾರೆ.
ಅಂದಹಾಗೆ ಈ ಹಿಂದೆ ಉತ್ತರ ಪ್ರದೇಶದಲ್ಲಿ ನಾಲ್ವರು ಸಿಎಂಗಳು ಅಧಿಕಾರಕ್ಕೆ ಮರಳಿದ್ದರು. ಆದರೆ ಇವರಲ್ಲಿ ಯಾರು ಕೂಡ ಪೂರ್ಣಾವಧಿ ಐದು ವರ್ಷಗಳ ಕಾಲ ಸಿಎಂ ಸೀಟಿನಲ್ಲಿ ಇರಲಿಲ್ಲ. ನಾರಾಯಣ್ ದತ್ ತಿವಾರಿ 1985ರಲ್ಲಿ ಸತತವಾಗಿ ಗೆದ್ದ ಯುಪಿಯ ಕೊನೆಯ ಸಿಎಂ ಆಗಿದ್ದಾರೆ. ಇದಾಗಿ 37 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಇತಿಹಾಸ ಮರುಕಳಿಸಿದೆ.
1957 ರಲ್ಲಿ ಸಂಪೂರ್ಣಾನಂದ, 1962 ರಲ್ಲಿ ಚಂದ್ರಭಾನು ಗುಪ್ತಾ ಮತ್ತು 1974 ರಲ್ಲಿ ಹೇಮಾವತಿ ನಂದನ್ ಬಹುಗುಣ (ಸಂಸದ ರೀಟಾ ಬಹುಗುಣ ಜೋಶಿ ತಂದೆ) ಅನುಕ್ರಮ ಅವಧಿಗೆ ಉಳಿಸಿಕೊಂಡ ಇತರ ಯುಪಿ ಮುಖ್ಯಮಂತ್ರಿಗಳಾಗಿದ್ದಾರೆ.
ಯೋಗಿ ಆದಿತ್ಯನಾಥ್ ಬಿಜೆಪಿಯಿಂದ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡ ಮೊದಲ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ರಾಜ್ಯದ ಮೂರನೇ ಮುಖ್ಯಮಂತ್ರಿಯಾಗಿದ್ದಾರೆ. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ (2007-12) ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (2012-17) ಅವರ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದ ಇತರ ಮುಖ್ಯಮಂತ್ರಿಗಳಾಗಿದ್ದಾರೆ.