ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಆಲಿಸಲಿಲ್ಲವೆಂದು
ಚಂಡೀಗಢದ ಪಿಜಿಐಎಂಇಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್ ನ 36 ನರ್ಸಿಂಗ್ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಾರ್ಯಕ್ರಮ ಆಲಿಸದವರ ವಿರುದ್ಧ ಶಿಕ್ಷೆಯ ಕ್ರಮವಾಗಿ ಅವರನ್ನು ಒಂದು ವಾರದವರೆಗೆ ಹಾಸ್ಟೆಲ್ ನಿಂದ ಹೊರಗೆ ಹೋಗಲು ಬಿಡದೆ ಒಳಗೇ ಇರುವಂತೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ.
ನರ್ಸಿಂಗ್ ನ ಮೊದಲ ಮತ್ತು ಮೂರನೇ ವರ್ಷದ ವಿದ್ಯಾರ್ಥಿನಿಯರಿಗೆ ಏಪ್ರಿಲ್ 30 ರಂದು ಪ್ರಸಾರವಾದ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯನ್ನು ಕೇಳಲು ಸೂಚಿಸಲಾಗಿತ್ತು.
ವಾರ್ಡನ್ ಅವರು ಏಪ್ರಿಲ್ 30 ರಂದು ಉಪನ್ಯಾಸ ಥಿಯೇಟರ್-1 ನಲ್ಲಿ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯನ್ನು ಕೇಳುವುದು ಕಡ್ಡಾಯವಾಗಿದೆ ಎಂದು ಮೊದಲ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಕಾರ್ಯಕ್ರಮ ಕೇಳದಿದ್ದರೆ ಅಂಥವರನ್ನು ಹಾಸ್ಟೆಲ್ ನಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಮೊದಲೇ ಎಚ್ಚರಿಸಲಾಗಿತ್ತು.
ಆದಾಗ್ಯೂ ಕಾರ್ಯಕ್ರಮ ಆಲಿಸಲು 36 ವಿದ್ಯಾರ್ಥಿನಿಯರು ಹಾಜರಾಗಲಿಲ್ಲ. ಹೀಗಾಗಿ ಮೇ 3 ರಂದು ಹೊರಡಿಸಿದ ಆದೇಶದಲ್ಲಿ ಅಧಿಕಾರಿಗಳು ನರ್ಸಿಂಗ್ ನ ಮೂರನೇ ವರ್ಷದ 28 ಮತ್ತು ಮೊದಲ ವರ್ಷದ ಎಂಟು ವಿದ್ಯಾರ್ಥಿಗಳು ಒಂದು ವಾರದವರೆಗೆ ಹಾಸ್ಟೆಲ್‌ನಿಂದ ಹೊರಬರದಂತೆ ಸೂಚಿಸಲಾಗಿದೆ.
ನರ್ಸಿಂಗ್ ವಿದ್ಯಾರ್ಥಿನಿಯರ ವಿರುದ್ಧದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಲಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿ “ನಾನು ಮಂಕಿ ಬಾತ್ ಅನ್ನು ಕೇಳಿಲ್ಲ. ಒಮ್ಮೆಯೂ ಕೇಳಿಲ್ಲ. ಎಂದಿಗೂ ಕೇಳುವುದಿಲ್ಲ. ನನಗೂ ಶಿಕ್ಷೆಯಾಗಲಿದೆಯೇ? ಒಂದು ವಾರದವರೆಗೆ ನನ್ನ ಮನೆಯಿಂದ ಹೊರಗೆ ಹೋಗುವುದನ್ನು ನಾನು ನಿಷೇಧಿಸುತ್ತೇನೆಯೇ? ಈಗ ಗಂಭೀರವಾಗಿ ಚಿಂತಿಸುತ್ತಿದ್ದೇನೆ.” ಎಂದು ವ್ಯಂಗ್ಯವಾಡಿದ್ದಾರೆ.