ಸರ್ಕಾರಿ ಉದ್ಯೋಗಿಯಾಗಿದ್ದ 80 ವರ್ಷದ ವೃದ್ಧರೊಬ್ಬರು 36 ವರ್ಷಗಳ ಹಿಂದೆ ತಮ್ಮ ಸೇವಾವಧಿಯಲ್ಲಿ ವಿಧವಾ ವೇತನ ದುರ್ಬಳಕೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಶಿಕ್ಷೆಯನ್ನು ಹೈಕೋರ್ಟ್ ಒಂದು ದಿನಕ್ಕೆ ಇಳಿಕೆ ಮಾಡಿದೆ.
ತಮಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಕೆಆರ್ ನಗರ ನಿವಾಸಿ ಹನುಮಂತ ರಾವ್ ಎಂಬವರು ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶವನ್ನು ನೀಡಿದೆ.
ಅಧೀನ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್, ಆದರೆ ಅರ್ಜಿದಾರರಿಗೆ 80 ವರ್ಷ ವಯಸ್ಸಾಗಿರುವುದು. ಅಲ್ಲದೆ ಈ ಹಿಂದೆ ಅವರು ಇಂತಹ ಯಾವುದೇ ಅಪರಾಧ ಮಾಡದೇ ಇರುವುದನ್ನು ಪರಿಗಣಿಸಿ ಶಿಕ್ಷೆ ಪ್ರಮಾಣವನ್ನು ಒಂದು ವರ್ಷದಿಂದ ಒಂದು ದಿನಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಅವರು ಎಸಗಿದ ಎರಡು ಅಪರಾಧಗಳಿಗೆ ತಲಾ 10,000 ರೂ. ದಂಡ ಪಾವತಿಸಬೇಕಿದ್ದು, ತಪ್ಪಿದರೆ ಮೂರು ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕಿದೆ.