ಭಾರತ ರತ್ನ, ಭಾರತದ ನೈಟಿಂಗೇಲ್ ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಲತಾ ಮಂಗೇಶ್ಕರ್ ಅಗಲಿಕೆಗೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದ ಲತಾ ಮಂಗೇಶ್ಕರ್ 36 ಭಾಷೆಗಳಲ್ಲಿ, 30 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು.
8 ದಶಕಗಳ ಕಾಲ ನಿರಂತರವಾಗಿ ತಮ್ಮ ಅಮೋಘ ಕಂಠ ಸಿರಿಯಿಂದಲೇ ಎಲ್ಲರ ಮನಗೆದ್ದಿದ್ದ ಗಾನ ಕೋಗಿಲೆ ಇಂದು ಹಾಡು ನಿಲ್ಲಿಸಿದೆ. ಲತಾ ಮಂಗೇಶ್ಕರ್ ಕನ್ನಡ ಸಿನಿಮಾಗಳಲ್ಲಿಯೂ ಹಾಡಿದ್ದರು. 1967ರಲ್ಲಿ ತೆರೆ ಕಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಎರಡು ಹಾಡುಗಳಿಗೆ ಧ್ವನಿಯಾಗಿದ್ದರು. ಆ ಎರಡೂ ಹಾಡುಗಳಿಗೆ 5 ದಶಕಗಳು ಕಳೆದರೂ ಇಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಬಿ.ಟಿ. ಅಥಣಿ ಗುರುಬಾಲ ಅವರ ನಿರ್ದೇಶನದಲ್ಲಿ ಮೂಡಿಬಂದ ಸಂಗೊಳ್ಳಿ ರಾಯಣ್ಣ ಚಿತ್ರದ ಲಕ್ಷ್ಮಣ್ ಬರಲೇಕರ್ ಸಂಗೀತ ನಿರ್ದೇಶನದ ’ಬೆಳ್ಳನೆ ಬೆಳಗಾಯಿತು…..” ಎಂಬ ಹಾಡು ಲತಾ ಮಂಗೇಶ್ಕರ್ ಧ್ವನಿಯಲ್ಲಿ ಇಂದಿಗೂ ಜನಪ್ರಿಯ. ಇದೇ ಚಿತ್ರದ ಮತ್ತೊಂದು ಹಾಡು ’ಎಲ್ಲಾರೆ ಇರತೀರೋ ಎಂದಾರೆ ಬರತೀರೋ……’ ಎಂಬ ಗೀತೆ ಕೂಡ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಮೂಡಿಬಂದಿದೆ.
ಈ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು ಅದರಲ್ಲಿ ಲತಾ ಮಂಗೇಶ್ಕರ್ ಅವರ ಕಂಠ ಸಿರಿಯಲ್ಲಿ ಮೂಡಿಬಂದ ಈ ಎರಡು ಗೀತೆಗಳು ಕನ್ನಡಿಗರ ಮನಗೆದ್ದಿವೆ.