ಮ್ಯಾನ್ಮಾರ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಆಕಾಶದಲ್ಲಿ ಹಾರ್ತಾ ಇದ್ದ ವಿಮಾನಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ವಿಚಿತ್ರ ಅಂದ್ರೆ 3500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಸೀಳಿಕೊಂಡು ಹೋದ ಗುಂಡು, ವಿಮಾನದೊಳಗೆ ಕುಳಿತಿದ್ದ ಪ್ರಯಾಣಿಕನಿಗೆ ತಗುಲಿದೆ.
63 ಪ್ರಯಾಣಿಕರನ್ನು ಹೊತ್ತಿದ್ದ ಮ್ಯಾನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ವಿಮಾನವು ಲೊಯಿಕಾವ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಜ್ಜಾಗಿತ್ತು. ಹೊರಟಿತ್ತು. ಈ ವೇಳೆ ವಿಮಾನ ಸುಮಾರು 3500 ಅಡಿ ಎತ್ತರದಲ್ಲಿ ಹಾರುತ್ತಿತ್ತು.
ನೆಲದ ಮೇಲೆ ನಿಂತು ಹಾರಿಸಿದ ಗುಂಡು ವಿಮಾನದ ಹೊರ ಪದರವನ್ನು ಭೇದಿಸಿ ಪ್ರಯಾಣಿಕನಿಗೆ ತಗುಲಿದೆ. ಗುಂಡು ತಗುಲಿ ಆತನಿಗೆ ತೀವ್ರ ರಕ್ತಸ್ರಾವವಾಗಿದ್ದು, ಬಟ್ಟೆ ಸುತ್ತಿ ರಕ್ತಸ್ರಾವ ತಡೆಯಲು ಯತ್ನಿಸಲಾಯ್ತು. ಈ ಘಟನೆ ನಂತರ ಕೆಲಕಾಲ ಎಲ್ಲಾ ವಿಮಾನಗಳ ಹಾರಾಟವನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗಿತ್ತು.
ಬಂಡುಕೋರ ಪಡೆಗಳು ವಿಮಾನದ ಮೇಲೆ ಗುಂಡು ಹಾರಿಸುತ್ತಿವೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರ ಆರೋಪಿಸಿದೆ. ಆದರೆ ಬಂಡುಕೋರ ಗುಂಪುಗಳು ಆರೋಪಗಳನ್ನು ನಿರಾಕರಿಸಿವೆ. ಕಳೆದ ವರ್ಷ ಸೇನೆಯು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಉರುಳಿಸಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಾಯಾ ರಾಜ್ಯದಲ್ಲಿ ಮಿಲಿಟರಿ ಮತ್ತು ಬಂಡಾಯ ಗುಂಪುಗಳ ನಡುವೆ ತೀವ್ರ ಚಕಮಕಿ ನಡೆಯುತ್ತಿದೆ.